ಬೆಂಗಳೂರು:- ದೆಹಲಿಯ ಸ್ಪೋಟ ಬೆನ್ನಲ್ಲೇ ಕರ್ನಾಟಕದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಬೆಂಗಳೂರಿನ ಏರ್ಪೋರ್ಟ್, ರೈಲು ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು, ಏರ್ಪೋರ್ಟ್ಗೆ ಬರುವ & ಹೋಗುವ ವಾಹನಗಳ ಮೇಲೆ ಹದ್ದಿನಕಣ್ಣಿಡಲಾಗಿದೆ. ಏರ್ಪೋಟ್ ಭದ್ರತೆಗೆ ಹೆಚ್ಚುವರಿ ಶಸ್ತ್ರ ಸಜ್ಜಿತ ಸಿಐಎಸ್ಎಫ್ ನಿಯೋಜನೆ ಜೊತೆಗೆ ವಿಮಾನ ನಿಲ್ದಾಣದ ಒಳ & ಹೊರ ಆವರಣದಲ್ಲಿ ಪ್ಯಾಟ್ರೋಲಿಂಗ್ ಗಸ್ತು ಹೆಚ್ಚಳ ಮಾಡಲಾಗಿದೆ. ಏರ್ಪೋರ್ಟ್ಗೆ ಬರುವ ಪ್ರಯಾಣಿಕರು, ಸಿಬ್ಬಂದಿಯ ತಪಾಸಣೆ ಮಾಡಲಾಗುತ್ತಿದೆ. ಪಾರ್ಕಿಂಗ್ ಏರಿಯಾ ಸೇರಿ ಎಲ್ಲೆಡೆ ಭದ್ರತಾ ಪಡೆ ಅಲರ್ಟ್ ಆಗಿದೆ.
ಮೆಜೆಸ್ಟಿಕ್ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮೆಟ್ರೋ ನಿಲ್ದಾಣ ಬಳಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ತಪಾಸಣೆ ಜೊತೆಗೆ ಶ್ವಾನದಳದಿಂದ ರೈಲು ನಿಲ್ದಾಣ ಸುತ್ತಮುತ್ತ ಪರಿಶೀಲನೆ ನಡೆಸಲಾಗಿದೆ. ಮೆಜೆಸ್ಟಿಕ್ ಸುತ್ತಮುತ್ತ ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದ್ದು, ಬಸ್ ನಿಲ್ದಾಣ, ರೈಲ್ವೆನಿಲ್ದಾಣದಲ್ಲಿ ಹೆಚ್ಚುವರಿ ಪೊಲೀಸರನ್ನ ನೇಮಿಸಲಾಗಿದೆ. ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದ್ದು, ನಗರ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಬೆಂಗಳೂರಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.


