ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪರಿಸರದ ಜೊತೆಗೆ ಸಂಪರ್ಕವನ್ನು ಬೆಳೆಸಲು ಕಣ್ಣು ಪ್ರಮುಖವಾಗಿವೆ. ಅವುಗಳನ್ನು ಕಾಲಕಾಲಕ್ಕೆ ಆರೈಕೆ ಮಾಡುವುದು ಅವಶ್ಯಕ. ಸಾಮಾನ್ಯರು ಇಂತಹ ಉಚಿತ ನೇತ್ರ ತಪಾಸಣೆ ಶಿಬಿರಗಳಲ್ಲಿ ಆರೈಕೆ ಮಾಡಿಕೊಂಡು ಶಿಬಿರಗಳ ಪ್ರಯೋಜನ ಪಡೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ಬಿ. ಬಸವರಡ್ಡೇರ ಅಭಿಪ್ರಾಯಪಟ್ಟರು.
ಸಮೀಪದ ಅಬ್ಬಿಗೇರಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಜಯಪ್ರಿಯಾ ಆಸ್ಪತ್ರೆ, ಜಯಪ್ರಿಯಾ ಮೆಡಿಕಲ್ ಫೌಂಡೇಶನ್ ಹುಬ್ಬಳ್ಳಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಬ್ಬಿಗೇರಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣೆ, ಶಸ್ತ್ರಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಎಷ್ಟೇ ಅಭಿವೃದ್ಧಿ ಸಾಧಿಸಿದ್ದರೂ ಮಾನವನ ಅಂಗವನ್ನು ಕೃತಕವಾಗಿ ಉತ್ಪಾದಿಸುವುದರಲ್ಲಿ ಇನ್ನೂ ಪೂರ್ಣ ಸಫಲರಾಗಿಲ್ಲ. ಹಾಗಾಗಿ ಕಣ್ಣಿನಂತಹ ಅಪೂರ್ವವಾದ ಅಂಗವನ್ನು ರಕ್ಷಿಸಿಕೊಳ್ಳಬೇಕಾಗಿದೆ. ವ್ಯಕ್ತಿಯು ಸತ್ತ ನಂತರ ನೇತ್ರ ನಾಶಮಾಡುವ ಬದಲಿಗೆ ದಾನಮಾಡಿದರೆ ಇಬ್ಬರು ವ್ಯಕ್ತಿಗಳಿಗೆ ಉಪಕಾರವಾಗುತ್ತದೆ. ನಾವು ತೀರಿದ ನಂತರ ನಮ್ಮ ದೇಹ ಅಳಿದರೂ ಅಂಧರ ಬಾಳಿಗೆ ಬೆಳಕಾಗುವ ಮೂಲಕ ನಾವು ಶಾಶ್ವತವಾಗಿರುವುದು ಸಾಧ್ಯವಾಗುತ್ತದೆ ಎಂದರು.
ತಪಾಸಣಾ ಶಿಬಿರದಲ್ಲಿ 78 ಜನ ನೇತ್ರ ತಪಾಸಣೆಗೆ ಒಳಗಾಗಿ 29 ಜನ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದರು. ಗುರಣ್ಣ ಅವರಡ್ಡಿ, ಬಸವರಾಜ ಪಲ್ಲೇದ, ಸುರೇಶ ಬಸವರಡ್ಡೇರ, ಎ.ವಿ. ವೀರಾಪೂರ, ಶಿವಪುತ್ರಪ್ಪ ತೆಗ್ಗಿನಕೇರಿ, ರಾಜು ಚನ್ನಪ್ಪಗೌಡ್ರ, ಲಕ್ಷ್ಮವ್ವ ಡಂಬಳ, ಮಲ್ಲು ಯಲ್ಲರಡ್ಡಿ, ವೀರಪ್ಪ ತಳವಾರ, ಅಂದಪ್ಪ ದ್ವಾಸಲ, ಸಕ್ರಗೌಡ ಪಾಟೀಲ, ಸುನಿತಾ ಬಸವರಡ್ಡೇರ, ವಿರೂಪಾಕ್ಷ ಅಕ್ಕಸಾಲಿ, ಶರಣಪ್ಪ ಹೂಗಾರ, ದೇವರಾಜ ತಳಕಲ್, ಶಿವಪ್ಪ ಬಂಡಿಹಾಳ, ಚಂದ್ರು ಶ್ರೀಗಿರಿ, ಶ್ರೀಕಾಂತ ಹಳ್ಳಿ ಉಪಸ್ಥಿತರಿದ್ದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿದ್ದು ಹನುಮನಾಳ ಮಾತನಾಡಿ, ದೃಷ್ಟಿಯು ಜಗತ್ತನ್ನು ಅರ್ಥಮಾಡಿಕೊಳ್ಳಲು ಮತ್ತು ಸಂಪರ್ಕಿಸಲು ಮುಖ್ಯವಾಗಿದೆ. ಕಣ್ಣುಗಳು ನಮಗೆ ಸುತ್ತಲಿನ ಪ್ರಪಂಚದೊಡನೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತವೆ. ನೇತ್ರಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ನೇತ್ರ ತಪಾಸಣಾ ಶಿಬಿರಗಳು ಕಣ್ಣಿನ ರೋಗಗಳನ್ನು ಗುಣಪಡಿಸಲು ಸಹಾಯ ಮಾಡುತ್ತವೆ. ಕಣ್ಣುಗಳ ಆರೋಗ್ಯ ಮತ್ತು ದೃಷ್ಟಿಯನ್ನು ಕಾಪಾಡಿಕೊಳ್ಳುವುದು ವ್ಯಕ್ತಿಯ ವೈಯಕ್ತಿಕ ಅಭಿವೃದ್ಧಿ ಮತ್ತು ವೃತ್ತಿ ಜೀವನಕ್ಕೆ ಅತ್ಯಗತ್ಯ ಎಂದರು.


