ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕೆರೆಗಳು ಜನ, ಜಾನುವಾರು, ಪಶು-ಪಕ್ಷಿಗಳಿಗೆ ಮತ್ತು ಅಂತರ್ಜಲ ಮಟ್ಟ ಕಾಪಾಡುವ ಜೀವ ಸೆಲೆಗಳು ಆಗಿದ್ದು, ಕೆರೆಗಳ ಅಭಿವೃದ್ಧಿ, ಸಂರಕ್ಷಣೆ ಅತ್ಯಂತ ಮಹತ್ವದ ಕಾರ್ಯವಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಮಂಗಳವಾರ ಪಟ್ಟಣದ ಪುರಸಭೆಯ ಕೆರೆ ಅಭಿವೃದ್ಧಿ ಶುಲ್ಕ 56 ಲಕ್ಷ ರೂ ಅನುದಾನದಲ್ಲಿ ಪಟ್ಟಣದ ಇಟ್ಟಿಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಪಟ್ಟಣದಲ್ಲಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಐತಿಹಾಸಿಕ ಹಿನ್ನೆಲೆಯುಳ್ಳ ಇಟ್ಟಿಕೆರೆ ಅಭಿವೃದ್ಧಿಯಾಗಬೇಕು ಎಂಬುದು ಪಟ್ಟಣದ ಜನರ ಅನೇಕ ವರ್ಷಗಳ ಬೇಡಿಕೆಯಾಗಿತ್ತು. ಕೆರೆ ಅಭಿವೃದ್ಧಿ ವಿಷಯದಲ್ಲಿ ಅನೇಕ ವಿರೋಧಾಭಾಸಗಳು ಇದ್ದವು. ಇದೀಗ ಕೆರೆ ಅಭಿವೃದ್ಧಿಪಡಿಸುವ ಕಾಲ ಕೂಡಿ ಬಂದಿದೆ. ವೈಜ್ಞಾನಿಕವಾಗಿ ಕೆರೆಗೆ ಸ್ವಚ್ಛವಾದ ನೀರು ಸೇರಬೇಕು ಮತ್ತು ಹೆಚ್ಚುವರಿ ನೀರು ಯಾವುದೇ ತೊಂದರೆಯಾಗದಂತೆ ಹರಿದು ಹೋಗಬೇಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು ಕೆರೆ ಅಭಿವೃದ್ಧಿಗೆ ಮುಂದಾಗಿದ್ದಾರೆ. ಕೆರೆಗೆ ನದಿ ನೀರು ಹರಿದು ಬರುವ ಯೋಜನೆ ಅಂತಿಮ ಹಂತದಲ್ಲಿದೆ. ಮಾದರಿ ಕೆರೆಯಾಗಿಸುವ ಕಾರ್ಯಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಕೆರೆ ಅತಿಕ್ರಮಣ ತೆರವುಗೊಳಿಸುವ ಸಂದರ್ಭದಲ್ಲಿ ಮನೆ ಕಳೆದುಕೊಂಡ ಮೂವರಿಗೆ ಆಶ್ರಯ ನಿವೇಶನ ಕಲ್ಪಿಸಲಾಗುವುದು ಎಂದರು.
ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಈ ಹಿಂದಿನ ಮುಖ್ಯಾಧಿಕಾರಿ ಮಹೇಶ್ ಹಡಪದ, ಮಹಾದೇವಪ್ಪ ಅಣ್ಣಿಗೇರಿ, ಕವಿತಾ ಶರಸೂರಿ, ಎಪಿಎಂಸಿ ಮಾಜಿ ಅಧ್ಯಕ್ಷ ನೀಲಪ್ಪ ಹತ್ತಿ, ಮಂಜುಳಾ ಗುಂಜಳ, ನಿಂಗಪ್ಪ ಬನ್ನಿ, ಅನಿಲ ಮುಳಗುಂದ, ಎಂ.ಆರ್. ಪಾಟೀಲ, ಗಂಗಾಧರ ಮೆಣಸಿನಕಾಯಿ, ಬಸವಣ್ಣೆಪ್ಪ ನಂದೆಣ್ಣವರ, ಸಿದ್ದಲಿಂಗಯ್ಯ ಹಿರೇಮಠ, ಶಂಕರ ಬ್ಯಾಡಗಿ, ನೀಲಕಂಠಪ್ಪ ಬಂಕಾಪುರ, ಶರಣುಗೋಡಿ, ಟಾಕಪ್ಪ ಸಾತಪುತೆ, ಸಂತೋಷ ಜಾವೂರ, ಪವನ ಬಂಕಾಪುರ, ಕಿರಣ ಮಹಾಂತಶೆಟ್ಟರ, ಪುರಸಭೆ ಇಂಜಿನಿಯರ್ ವೀರೇಂದ್ರ ಸಿಂಗ್ ಕಾಟೇವಾಲೆ, ಸುರೇಶ ಹಟ್ಟಿ, ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್, ಮಂಜುನಾಥ ಹೊಗೆಸೊಪ್ಪಿನ, ಮಂಜುನಾಥ ಗಜಾಕೋಶ ಸೇರಿ ಅನೇಕರಿದ್ದರು.


