ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಮೆಕ್ಕೆಜೋಳದ ಬೆಳೆಗೆ ಬೆಂಬಲ ಬೆಲೆ ಘೋಷಣೆಯಾಗಿದ್ದು, ಖರೀದಿ ಕೇಂದ್ರ ಸ್ಥಾಪನೆ ಮಾಡಬೇಕೆಂದು ಶಿರಹಟ್ಟಿ ತಾಲೂಕಾ ಭಾರತೀಯ ಕಿಸಾನ್ ಸಂಘದ ವತಿಯಿಂದ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷ ಶಿವಪುತ್ರಪ್ಪ ನೆಲಗುಡ್ಡದ, ಜಿಲ್ಲಾ ಪ್ರ.ಕಾ. ರಮೇಶ್ ಕೋಳಿವಾಡ, ಜಿಲ್ಲೆಯಲ್ಲಿ ಅತೀ ಹೆಚ್ಚು ರೈತರು ಮುಂಗಾರು ಹಂತದಲ್ಲಿ ಬಿತ್ತನೆ ಮಾಡಿದ್ದು, ಅಕ್ಟೋಬರ್ 15ರಿಂದ ಇಲ್ಲಿಯವರೆಗೆ ರೈತರು ಬೆಳೆ ಕಟಾವು ಮಾಡುತ್ತಿದ್ದಾರೆ. ರೈತರ ಆರ್ಥಿಕ ಪರಿಸ್ಥಿತಿ ಗಂಭೀರವಾಗಿದ್ದು, ಮಾರಾಟ ದರ ಸದ್ಯ 1600-1800 ರೂ.ಗಳವರೆಗೆ ಮಾತ್ರ ಇದೆ. ರೈತರು ಬ್ಯಾಂಕ್ ಸಾಲ, ಕೈಗಡ ಸಾಲ ಮಾಡಿಕೊಂಡಿದ್ದಲ್ಲದೆ, ಬೆಳೆ ನಿರ್ವಹಣೆ ಮಾಡಲು ಸಾಕಷ್ಟು ಹಣ ಖರ್ಚು ಮಾಡುತ್ತಿದ್ದಾರೆ. ಆದ್ದರಿಂದ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯೊಳಗೆ ನಿಗದಿಪಡಿಸಿದ 2400 ರೂ ದರದಲ್ಲಿ ಜಿಲ್ಲೆಯ ಎಲ್ಲಾ ತಾಲೂಕು/ಗ್ರಾಮಗಳ ಸೇವಾ ಸಹಕಾರಿ ಸಂಘಗಳ ಮುಖಾಂತರ ಖರೀದಿ ಮಾಡಬೇಕು. ಕಡಿಮೆ ದರದಲ್ಲಿ ಮೆಕ್ಕೆಜೋಳ ಖರೀದಿ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಲಕ್ಷ್ಮಣ ಸಾವಿರಕುರಿ, ಫಕ್ಕೀರಪ್ಪ ದೊಡ್ಡಮನಿ, ದೇವಪ್ಪ ಉಪ್ಪಾರ, ಚಂದ್ರಗೌಡ ಪಾಟೀಲ, ಮಲ್ಲಿಕಾರ್ಜುನ ಸೊರಟೂರ, ಮಲ್ಲಪ್ಪ ದುರಗಣ್ಣವರ, ಶಿವಪುತ್ರಪ್ಪ ತಾರೀಕೊಪ್ಪ, ಮಂಜುನಾಥ ಕೊಟಗಿ ಮುಂತಾದವರು ಉಪಸ್ಥಿತರಿದ್ದರು.


