ಪ್ಯಾನ್ ಇಂಡಿಯಾ ನಟಿ ರಶ್ಮಿಕಾ ಮಂದಣ್ಣ ಇದೀಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಚಿತ್ರೀಕರಣ ಹಾಗೂ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತನ್ನ ವೃತ್ತಿಜೀವನದ ಜೊತೆಗೆ ವೈಯಕ್ತಿಕ ಬದುಕು ಸಹ ಮಾಧ್ಯಮಗಳಲ್ಲಿ ಚರ್ಚೆಯ ವಿಷಯವಾಗಿದ್ದು, ವಿಜಯ್ ದೇವರಕೊಂಡ ಅವರೊಂದಿಗೆ ನಿಶ್ಚಿತಾರ್ಥ ಮತ್ತು ಮದುವೆ ಕುರಿತು ಕೇಳಲಾದ ಪ್ರತಿಯೊಂದು ಪ್ರಶ್ನೆಗೆ ರಶ್ಮಿಕಾ ನುಡಿಗಳ ಮೂಲಕ ಸೂಕ್ಷ್ಮವಾಗಿ “ಗ್ರೀನ್ ಸಿಗ್ನಲ್” ನೀಡುತ್ತಿದ್ದಾರೆ.
ನೆಗಟಿವ್ ಪಾತ್ರಕ್ಕೂ ಸಮ್ಮತಿ – ಐಟಂ ಸಾಂಗ್‌ಗೆ ಷರತ್ತು!
ಇತ್ತೀಚೆಗೆ ಹಿರಿಯ ನಟ ಜಗಪತಿ ಬಾಬು ಅವರೊಂದಿಗೆ ನಡೆದ ಸಂದರ್ಶನದಲ್ಲಿ ರಶ್ಮಿಕಾ ತಮ್ಮ ಪಾತ್ರಗಳ ಆಯ್ಕೆ ಕುರಿತು ಸ್ಪಷ್ಟವಾಗಿ ಮಾತನಾಡಿದ್ದಾರೆ. ಅವರು, “ನನಗೆ ನೆಗಟಿವ್ ಶೇಡ್ ಪಾತ್ರಗಳಲ್ಲಿ ನಟಿಸುವ ಆಸಕ್ತಿ ಇದೆ. ಅಂತಹ ರೋಲ್ ಸಿಕ್ಕರೆ ಖಂಡಿತಾ ಮಾಡುತ್ತೇನೆ,” ಎಂದು ಹೇಳಿದ್ದಾರೆ.
ಐಟಂ ಸಾಂಗ್ ಕುರಿತಾಗಿ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ರಶ್ಮಿಕಾ, “ನಾನು ನನ್ನದೇ ಸಿನಿಮಾಗಳ ಹೊರತುಪಡಿಸಿ ಬೇರೆ ಚಿತ್ರಗಳಲ್ಲಿ ಸ್ಪೆಷಲ್ ಸಾಂಗ್ ಮಾಡಲು ಸಿದ್ಧ. ಆದರೆ ಅದು ನನ್ನ ಮನಸ್ಸಿಗೆ ಹತ್ತಿದ ನಾಲ್ವರು ನಿರ್ದೇಶಕರ ಸಿನಿಮಾಗಳಲ್ಲಾದ್ರೆ ಮಾತ್ರ. ಅವರು ಯಾರು ಎನ್ನುವುದನ್ನು ಹೇಳಲ್ಲ. ಆದರೆ ಅವರು ಕೇಳಿದ್ರೆ ಮಾತ್ರ ನಾನು ಡ್ಯಾನ್ಸ್ ನಂಬರ್ ಮಾಡುತ್ತೇನೆ. ಬೇರೆ ಯಾರೇ ಕೇಳಿದರೂ ಕೂಡ ಮಾಡಲ್ಲ,” ಎಂದು ನಗುತ್ತಾ ಹೇಳಿದ್ದಾರೆ.
ಆ ನಾಲ್ವರು ನಿರ್ದೇಶಕರು ಯಾರು?
ರಶ್ಮಿಕಾ ಉಲ್ಲೇಖಿಸಿದ ಆ “ನಾಲ್ವರು ನಿರ್ದೇಶಕರು” ಯಾರು ಎಂಬ ಪ್ರಶ್ನೆ ಇದೀಗ ಅಭಿಮಾನಿಗಳ ನಡುವೆ ಕುತೂಹಲ ಮೂಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಅವರು ಎಸ್.ಎಸ್. ರಾಜಮೌಳಿ, ಸಂಜಯ್ ಲೀಲಾ ಭನ್ಸಾಲಿ, ರಾಜ್ ಕುಮಾರ್ ಹಿರಾನಿ ಹಾಗೂ ಸುಕುಮಾರ್ ಇರಬಹುದು ಎಂದು ಊಹಿಸಿದ್ದಾರೆ.
ಐಟಂ ಸಾಂಗ್‌ನಲ್ಲಿ ಮೆರೆದ ‘ಥಮಾ’ ರಶ್ಮಿಕಾ
ರಶ್ಮಿಕಾ ಈಗಾಗಲೇ ತನ್ನದೇ ‘ಥಮಾ’ ಸಿನಿಮಾದಲ್ಲಿ ಸ್ಪೆಷಲ್ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಂದ ಅದ್ಭುತ ಪ್ರತಿಕ್ರಿಯೆ ಪಡೆದಿದ್ದರು. ತಮ್ಮ ನೃತ್ಯ ಮತ್ತು ಆಕರ್ಷಕ ಪರಫಾರ್ಮೆನ್ಸ್‌ನಿಂದ ಆ ಹಾಡು ವೈರಲ್ ಆಗಿತ್ತು.
ಯಶಸ್ಸಿನ ಹಾದಿಯಲ್ಲಿ ದಿ ಗರ್ಲ್‌ಫ್ರೆಂಡ್
ಸದ್ಯ ರಶ್ಮಿಕಾ ನಟನೆಯ ‘ದಿ ಗರ್ಲ್‌ಫ್ರೆಂಡ್’ ಸಿನಿಮಾ ತೆರೆಕಂಡಿದ್ದು, ವಿಮರ್ಶಕರಿಂದ ಹಾಗೂ ಪ್ರೇಕ್ಷಕರಿಂದ ಪಾಸಿಟಿವ್ ರೆಸ್ಪಾನ್ಸ್ ಪಡೆಯುತ್ತಿದೆ. ಈ ಯಶಸ್ಸಿನಿಂದ ರಶ್ಮಿಕಾ ಮಂದಣ್ಣ ತಮ್ಮ ಕ್ಯಾರಿಯರ್‌ನಲ್ಲಿ ಮತ್ತೊಂದು ಘಟ್ಟ ತಲುಪಿದ್ದಾರೆ ಎಂದು ಹೇಳಬಹುದು.


