ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಹಿರೇಮಠದಲ್ಲಿ ನಡೆದಿರುವ ಜಾತ್ರಾ ಮಹೋತ್ಸವದಲ್ಲಿ 4ನೇ ದಿನವಾದ ಬುಧವಾರ ಶ್ರೀ ವೀರಭದ್ರ ದೇವರು ಮತ್ತು ಭದ್ರಕಾಳಿಯರ ವಿವಾಹ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗಿತು. ಮಲ್ಲನಗೌಡ ಪಾಟೀಲ ದಂಪತಿಗಳು ವರನ ಕಡೆಯವರಾದರೆ, ಪ್ರಶಾಂತ ಜುಟ್ಲ ದಂಪತಿಗಳು ವಧುವಿನ ಕಡೆಯವರಾಗಿ ಶಾಸ್ತ್ರಬದ್ಧವಾದ ಮದುವೆಯನ್ನು ನಡೆಸಿಕೊಟ್ಟರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಷಿ.ಬ್ರ. ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಶ್ರೀ ವೀರಭದ್ರ ಮತ್ತು ಭದ್ರಕಾಳಿಯರ ಮದುವೆಯ ಸನ್ನಿವೇಶವನ್ನು ರಸವತ್ತಾಗಿ ವಿವರಿಸಿದರು. ಇಂದಿನ ಈ ಮದುವೆ ಅಲೌಕಿಕ ವ್ಯಕ್ತಿಗಳದ್ದಾಗಿದ್ದರೂ, ಲೌಕಿಕ ವ್ಯಕ್ತಿಗಳ ಮದುವೆ ಹೇಗಾಗುತ್ತದೆಯೋ ಹಾಗೆಯೇ ನಿಭಾಯಿಸಿದ್ದನ್ನು ಕಂಡು ನಮಗೆ ತುಂಬಾ ಸಂತಸವಾಗಿದೆ. ಇಂತಹ ಧಾರ್ಮಿಕ ಕಾರ್ಯಗಳು ಊರಿನಲ್ಲಿ ಮೇಲಿಂದ ಮೇಲೆ ನಡೆಯುತ್ತಿದ್ದರೆ ಊರು ಮತ್ತು ಜನತೆ ಸಮೃದ್ಧವಾಗಿ, ಸುಖ, ಸಂತೋಷ, ನೆಮ್ಮದಿಯಿಂದ ಬಾಳುತ್ತಾರೆ. ಎಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳು ನಡೆಯುತ್ತವೆಯೋ ಅಲ್ಲಿ ದೇವಾನುದೇವತೆಗಳು ನೆಲೆಸಿರುತ್ತಾರೆ. ಆದ್ದರಿಂದ ಇಂತಹ ಕಾರ್ಯಗಳಿಗೆ ಹೆಚ್ಚಿನ ಗಮನ ನೀಡಿ, ಶ್ರದ್ಧೆಯಿಂದ ಪಾಲ್ಗೊಳ್ಳಿರಿ ಎಂದರು.
ತಾ.ಪಂ. ಮಾಜಿ ಸದಸ್ಯ ಸಂದೇಶ್ ದೊಡ್ಡಮೇಟಿ ಮಾತನಾಡಿ, ಇಂದು ಇಂತಹ ಅಪರೂಪದ ಸನ್ನಿವೇಶವನ್ನು ಕಾಣುವ ಸುಯೋಗ ನಮಗೆ ಒದಗಿ ಬಂದಿದೆ. ಇಂತಹ ಅವಕಾಶವನ್ನು ಸೃಷ್ಟಿಸಿಕೊಟ್ಟ ಶ್ರೀಗಳವರಿಗೆ ನಾವು ಅದೆಷ್ಟು ಕೃತಜ್ಞರಾಗಿದ್ದರೂ ಕಡಿಮೆ. ಇಂತಹ ಕಾರ್ಯಕ್ರಮಗಳು ಕಣ್ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ನರೇಗಲ್ಲ ಪಟ್ಟಣದ ಜನತೆ ಈ ಕಾರ್ಯ ನೆರವೇರಿಸಿದ್ದು ವಿಶೇಷ ಆನಂದವನ್ನು ನೀಡಿದೆ ಎಂದರು.
ವೇದಿಕೆಯ ಮೇಲೆ ಚಂದ್ರಶೇಖರಯ್ಯ ಭುಸನೂರಮಠ, ಚನ್ನಬಸಪ್ಪ ಗೋದಿ, ವೀರೇಶ ನೇಗಲಿ ಉಪಸ್ಥಿತರಿದ್ದರು. ವಿವಾಹ ಕಾರ್ಯವನ್ನು ರುದ್ರಮುನಿ ಸ್ವಾಮಿ ಹಿರೇಮಠ ಮತ್ತು ರುದ್ರಯ್ಯ ಸೊಬರದ ನಡೆಸಿಕೊಟ್ಟರು. ಶಿವಾನಂದ ಹಿರೇಮಠ ಸ್ವಾಗತಿಸಿದರು. ಶಿಕ್ಷಕ ಸುರೇಶ ಹಳ್ಳಿಕೇರಿ ನಿರೂಪಿಸಿದರು.



