ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆ ತಯಾರಿಕೆಗಾಗಿ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಗೆ ಅವಶ್ಯಕವಾಗಿರುವ ಬೇಡಿಕೆಗಳನ್ನು ಪಟ್ಟಿ ಮಾಡಿ ಸಲ್ಲಿಸಬೇಕು. ಕಚೇರಿಯಲ್ಲಿರುವ ಸಮಸ್ಯೆ ಹಾಗೂ ಬೇಕಾಗಿರುವ ಅನುದಾನದ ಕುರಿತು ಚರ್ಚಿಸಿ ಜಿಲ್ಲೆಗೆ ಬೇಕಾಗಿರುವ ಅನುದಾನ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ವಿವಿಧ ವಿಷಯಗಳ ಬಗ್ಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂದಿನ ವಾರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲರ ಅಧ್ಯಕ್ಷತೆಯಲ್ಲಿ ಜಿಲ್ಲಾ ಯೋಜನಾ ಸಮಿತಿ ಸಭೆ ನಡೆಯಲಿದ್ದು, ಆ ಸಭೆಗೆ ಸಂಬಂಧಿತ ಎಲ್ಲ ಇಲಾಖೆಯವರು ವಾರ್ಷಿಕ ಕರಡು ಅಭಿವೃದ್ಧಿ ಯೋಜನೆ ತಯಾರಿಕೆಗಾಗಿ ಪಟ್ಟಿ ಸಲ್ಲಿಸಬೇಕಾಗುತ್ತದೆ. ವಿವಿಧ ಇಲಾಖೆಗಳ ಅಧಿಕಾರಿಗಳು ತಾಲೂಕಾವಾರು ಜನಸಂಖ್ಯೆಗನುಗುಣವಾಗಿ ಸದ್ಯ ಲಭ್ಯವಿರುವ ಅನುದಾನ ಹೊರತುಪಡಿಸಿ ಹೆಚ್ಚಿನ ಅಭಿವೃದ್ಧಿ ಕಾರ್ಯಕ್ಕಾಗಿ ಬೇಕಾಗುವ ಅನುದಾನದ ವಿವರವನ್ನು ಮತ್ತು ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ 2026-27ನೇ ಸಾಲಿಗೆ ಪಂಚಾಯತ್ ರಾಜ್ ಸಂಸ್ಥೆಗಳ ಕಾರ್ಯಕ್ರಮಗಳಿಗೆ ಕರಡು ವಾರ್ಷಿಕ ಕರಡು ಆಯವ್ಯಯ, 2026-27ನೇ ಸಾಲಿಗೆ ಕೆಳಹಂತದಿದ್ದು ಜಿಲ್ಲಾ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆ ತಯಾರಿಕೆ, 2025-26ನೇ ಸಾಲಿನ ಅಕ್ಟೋಬರ್ 2025ರ ಮಾಹಿನೆಯ ಅಂತ್ಯದವರೆಗಿನ ಪ್ರಗತಿ ಪರಿಶೀಲನೆ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಜಿ.ಪಂ ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.


