ವಿಜಯಸಾಕ್ಷಿ ಸುದ್ದಿ, ಗದಗ: ವ್ಯಕ್ತಿಯೊಬ್ಬರಿಗೆ ಪಿತ್ತಕೋಶದ ಶಸ್ತ್ರಚಿಕಿತ್ಸೆ ವಿಫಲಗೊಂಡ ಹಿನ್ನೆಲೆಯಲ್ಲಿ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದರು. ಆದರೆ, ಅಚ್ಚರಿ ಎನ್ನುವಂತೆ ಉಸಿರಾಟ ಆರಂಭಿಸಿ, ಒಂದು ವಾರದ ಕಾಲ ಜೀವನ್ಮರಣದ ಹೋರಾಟ ನಡೆಸಿದ ನಾರಾಯಣ ಹೊನ್ನಲ್ ಗುರುವಾರ ತಡರಾತ್ರಿ ಮೃತಪಟ್ಟಿದ್ದಾರೆ. ಆದರೆ ಸಾವಿನಲ್ಲೂ ಸಾರ್ಥಕತೆ ಮೆರೆದ ನಾರಾಯಣ್ ವನ್ನಾಲ್ ಕುಟುಂಬಸ್ಥರು, ಅಂಗಾಂಗ ದಾನಕ್ಕೆ ಸಮ್ಮತಿ ಸೂಚಿಸಿ ನಾಲ್ವರ ಬಾಳಲ್ಲಿ ಬೆಳಕು ಮೂಡಿಸಿದ್ದಾರೆ. ಎರಡು ಮೂತ್ರಪಿಂಡಗಳು ಹಾಗೂ ಎರಡು ಕಣ್ಣುಗಳು ನಾಲ್ವರ ಜೀವಕ್ಕೆ ಹೊಸ ಆಯಾಮ ನೀಡಿವೆ.
ನಾರಾಯಣ ಅವರು ನ. 6ರಂದು ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಪಿತ್ತಕೋಶದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಾರಾಯಣ್ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು.
ಇದರ ಬೆನ್ನಲ್ಲೇ, ಕುಟುಂಬಸ್ಥರು ಮೃತದೇಹವನ್ನು ಗದಗ-ಬೆಟಗೇರಿಗೆ ತಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಮೃತರ ಆತ್ಮಕ್ಕೆ ಶಾಂತಿ ಕೋರಿ, ಭಾವಪೂರ್ಣ ಶ್ರದ್ಧಾಂಜಲಿ ಬ್ಯಾನರ್‌ಗಳನ್ನು ಸಹ ಗದಗ-ಬೆಟಗೇರಿಯ ಹಲವೆಡೆ ಹಾಕಲಾಗಿತ್ತು. ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ಮೂಲಕ ನಾರಾಯಣ್ ಅವರ ದೇಹವನ್ನು ಮನೆಗೆ ತರುತ್ತಿದ್ದಂತೆ ನಾರಾಯಣ್ ಅವರು ಇದ್ದಕ್ಕಿದ್ದಂತೆ ಉಸಿರಾಡಲು ಪ್ರಾರಂಭಿಸಿ ಕಣ್ಣು ತೆರೆದಿದ್ದಾರೆ. ಈ ಅನಿರೀಕ್ಷಿತ ಪವಾಡವನ್ನು ಕಂಡು ಕುಟುಂಬದ ಸದಸ್ಯರು ತೀವ್ರ ಆಶ್ಚರ್ಯ ಹಾಗೂ ಸಂತೋಷ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಅವರನ್ನು ಬೆಟಗೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ನ. 6ರಿಂದ 13ರವರೆಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿತ್ತು.
ಅಂತಿಮವಾಗಿ ಗುರುವಾರ ನಾರಾಯಣ ಅವರ ಮೆದುಳು ನಿಷ್ಕ್ರಿಯವಾಗಿದೆ ಎಂದು ವೈದ್ಯರು ಘೋಷಿಸಿದರು. ಆಗ ಹುಲಕೋಟಿಯ ಕೆ.ಎಚ್. ಪಾಟೀಲ ಸಂಶೋಧನಾ ಕೇಂದ್ರ ಮತ್ತು ಆಸ್ಪತ್ರೆಯ ಆಡಳಿತ ಮಂಡಳಿ ಸದಸ್ಯರು ಕುಟುಂಬದ ಮನವೊಲಿಸಿ ಅಂಗಾಂಗ ದಾನಕ್ಕೆ ಸಮ್ಮತಿ ಪಡೆದರು. ನಾರಾಯಣ್ ಕುಟುಂಬದ ಸದಸ್ಯರ ಒಪ್ಪಿಗೆಯ ಮೇರೆಗೆ ಹುಲಕೋಟಿಯ ಕೆ.ಎಚ್. ಪಾಟೀಲ ಆಸ್ಪತ್ರೆಯಲ್ಲಿ ಎರಡು ಮೂತ್ರಪಿಂಡ ಹಾಗೂ ಎರಡು ಕಣ್ಣುಗಳನ್ನು ತೆಗೆದುಕೊಳ್ಳಲಾಯಿತು.
ಎರಡು ಮೂತ್ರಪಿಂಡಗಳ ಪೈಕಿ ಒಂದನ್ನು ಕೆ.ಎಚ್. ಪಾಟೀಲ ಆಸ್ಪತ್ರೆಯ ರೋಗಿಯೊಬ್ಬರಿಗೆ ಕಸಿ ಹಾಗೂ ಇನ್ನೊಂದನ್ನು ಧಾರವಾಡದ ಎಸ್‌ಡಿಎಂ ಆಸ್ಪತ್ರೆಯ ರೋಗಿಯೊಬ್ಬರಿಗೆ ಕಸಿ ಮಾಡಲಾಯಿತು. ಎಂ.ಎ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಎರಡು ಕಣ್ಣುಗಳನ್ನು ಪಡೆದುಕೊಂಡಿತು. ಶುಕ್ರವಾರ ಸಂಜೆ ನಾರಾಯಣ್ ವನ್ನಾಲ್ ಅವರ ಅಂತ್ಯಕ್ರಿಯೆ ಬೆಟಗೇರಿ ಮುಕ್ತಿಧಾಮದಲ್ಲಿ ನೆರವೇರಿತು.
ಬೆಟಗೇರಿಯ ಕುರುಹಿನಶೆಟ್ಟಿ ಸಮಾಜದ ನೀಲಕಂಠೇಶ್ವರ ಮಠದ ನೀಲಕಂಠ ಪಟ್ಟದಾರ್ಯ ಸ್ವಾಮೀಜಿ, ವನ್ನಾಲ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಂಗಾಂಗ ದಾನ ಯಶಸ್ವಿಗೊಳಿಸಿದ ಆರ್‌ಎಂಎಸ್ ಚೇರಮನ್ ಡಾ. ಎಸ್.ಆರ್. ನಾಗನೂರ, ಡಾ. ಅವಿನಾಶ ಓದುಗೌಡರ, ಡಾ. ಭುವನೇಶ ಆರಾಧ್ಯ, ಡಾ. ಪವನ ಕೋಳಿವಾಡ, ಡಾ. ದೀಪಕ ಕುರಹಟ್ಟಿ, ಡಾ. ನಿಯಾಜ್, ಡಾ. ವಿನಾಯಕ, ಡಾ. ಹರೀಶ ನಾಡಗೌಡರ, ಡಾ. ವಿಶಾಲ ಕಪ್ಪತ್ತನವರ, ಡಾ. ವಂದನಾ ಕಾಂಬಳೆ, ಡಾ. ಪ್ರಭು ಮಡಿವಾಳರ, ಡಾ. ಪ್ಯಾರಾಲಿ ನೂರಾನಿ, ಎಂ.ಆರ್. ಪಾಟೀಲ, ಸಚಿನ್ ಪಾಟೀಲ, ಆರ್.ಆರ್. ಓದುಗೌಡರ, ಸಿಬ್ಬಂದಿಗಳಾದ ರಾಬರ್ಟ್ ಹಳ್ಳಿ ಸೇರಿದಂತೆ ಅನೇಕ ಗಣ್ಯರು ವನ್ನಾಲ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಗದಗ ಜಿಲ್ಲಾ ಪೊಲೀಸರು ಗುರುವಾರ ತಡರಾತ್ರಿ `ಗ್ರೀನ್ ಕಾರಿಡಾರ್’ ಮೂಲಕ ಒಂದು ಅಮೂಲ್ಯ ಜೀವವನ್ನು ಉಳಿಸಿದ್ದಾರೆ. ಗದಗ ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹುಲಕೋಟಿಯ ಕೆ.ಎಚ್. ಪಾಟೀಲ ಆಸ್ಪತ್ರೆಯಿಂದ ಧಾರವಾಡದ ಎಸ್‌ಡಿಎಂ ಆಸ್ಪತ್ರೆಯ ರೋಗಿಯೊಬ್ಬರಿಗೆ ಬೇಕಾಗಿದ್ದ ಮೂತ್ರಪಿಂಡವನ್ನು ಸಾಗಾಟ ಮಾಡಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ ಅವರು ತ್ವರಿತ ಯೋಜನೆಯಿಂದಾಗಿ ಗ್ರೀನ್ ಕಾರಿಡಾರ್ ಸಿದ್ಧವಾಯಿತು.
ಗದಗ-ಧಾರವಾಡದ ನಡುವಿನ ರಸ್ತೆಯುದ್ದಕ್ಕೂ ಪೊಲೀಸರು ನಿಂತು ಸಾರ್ವಜನಿಕ ಸಂಚಾರಕ್ಕೆ ಅಡಚಣೆಯಾಗದಂತೆ, ಆಂಬ್ಯುಲೆನ್ಸ್‌ಗೆ ಕ್ಷಿಪ್ರ ಗತಿಯಲ್ಲಿ ಸಾಗಲು ಅನುವು ಮಾಡಿಕೊಟ್ಟರು. ದಾಖಲೆ ವೇಗದಲ್ಲಿ ಕಿಡ್ನಿಯನ್ನು ಸಾಗಿಸಲಾಯಿತು.


