ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸರಕಾರಿ ಶಾಲೆಗಳ ಪ್ರಗತಿಯಲ್ಲಿ ಪೋಷಕರ ವಿಶ್ವಾಸ ಮತ್ತು ಸಹಕಾರ ಅತಿ ಮಹತ್ವದ್ದಾಗಿದ್ದು, ಶಾಲೆಗಳು ಸಮಾಜದಲ್ಲಿನ ಒಂದು ಭಾಗವಿದ್ದಂತೆ. ಅವುಗಳ ಬೆಳವಣಿಗೆಗೆ ಸಮಾಜದ ಪ್ರತಿಯೊಬ್ಬರ ಪಾತ್ರ ಮುಖ್ಯವಾಗಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಎಂ.ಆರ್. ಪಾಟೀಲ ಹೇಳಿದರು.
ಅವರು ಪಟ್ಟಣದ ಹಿರಿಯ ಮಾದರಿ ಸರಕಾರಿ ಪ್ರಾಥಮಿಕ ಶಾಲೆ ನಂ. 1ರಲ್ಲಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಶುಕ್ರವಾರ ಮಕ್ಕಳ ದಿನಾಚರಣೆ ಅಂಗವಾಗಿ ರಾಜ್ಯಾದ್ಯಂತ ಏರ್ಪಡಿಸಲಾಗಿದ್ದ ಶಿಕ್ಷಕರ-ಪೋಷಕರ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರಿ ಶಾಲೆಗಳಲ್ಲಿ ಎಲ್ಲ ರೀತಿಯ ಸೌಲಭ್ಯಗಳು ಮಕ್ಕಳಿಗೆ ದೊರೆಯುತ್ತಿವೆ. ನುರಿತ, ಅನುಭವಿ ಶಿಕ್ಷಕರು ಸರಕಾರಿ ಶಾಲೆಗಳಲ್ಲಿಯೂ ಇದ್ದು, ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಲಿದೆ. ಪಾಲಕರು ಆದಷ್ಟು ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕು. ಶಿಕ್ಷಕರು ಮತ್ತು ಪೋಷಕರ ಸಹಕಾರ ಶಾಲೆಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಸಮಾಜಸೇವಕ ಶಂಕರ ಬ್ಯಾಡಗಿ ಮಾತನಾಡಿ, ಸರಕಾರಿ ಶಾಲೆಗಳಿಗೆ ಪೋಷಕರೇ ಆಧಾರ. ಅವರ ಸಹಕಾರವೇ ಶಾಲೆಗಳ ಬೆಳವಣಿಗೆಗೆ ಕಾರಣ. ಅನೇಕ ಸರಕಾರಿ ಶಾಲೆಗಳಿಗೆ ಪೋಷಕರು, ದಾನಿಗಳು ನೀಡಿದ ಸಹಕಾರದಿಂದ ಅನೇಕ ಸೌಲಭ್ಯಗಳು ಲಭ್ಯವಾಗಿವೆ. ಉತ್ತಮ ಶಿಕ್ಷಣ ದೊರೆಯುತ್ತಿರುವ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದರಿಂದ ಅನೇಕ ಉಪಯೋಗಗಳು ದೊರೆಯುತ್ತಿವೆ ಎಂದು ಹೇಳಿದರು.
ಮುಖ್ಯೋಪಾಧ್ಯಾಯ ಡಿ.ಎನ್. ದೊಡ್ಡಮನಿ ಶಿಕ್ಷಕರ-ಪೋಷಕರ ಸಭೆಯ ಮಹತ್ವ ವಿವರಿಸಿ, ಮಕ್ಕಳ ಪೋಷಕರು ಶಾಲೆಯ ಮಹತ್ವದ ಆಸ್ತಿಯಿದ್ದಂತೆ. ಅವರ ಸಹಕಾರದಿಂದ ಶಾಲೆಯಲ್ಲಿ ಅನೇಕ ಕ್ರಿಯಾತ್ಮಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತವೆ. ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಆದ್ಯತೆ ನೀಡಬೇಕು. ಶಾಲೆಗಳಲ್ಲಿ ದೊರೆಯುವ ಪ್ರಯೋಜನಗಳ ಕುರಿತು ವಿವರಿಸಿದರು.
ಸಭೆಯ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಯಲ್ಲಪ್ಪ ಶಿರಬಡಗಿ ವಹಿಸಿದ್ದರು. ದಿಗಂಬರ ಪೂಜಾರ, ಇಸಿಓ ರಾಘವೇಂದ್ರ ಜೋಶಿ, ಸಿಆರ್‌ಪಿ ಉಮೇಶ ನೇಕಾರ, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರಾದ ಇ.ಎಚ್. ಪೀಟರ್, ಎಫ್.ಎಚ್. ನದಾಫ್, ಎಸ್.ಎಸ್. ಮಹಾಲಿಂಗಶೆಟ್ಟರ, ಅಕ್ಷತಾ ಕಾಟೇಗಾರ, ಖುದೂಷಿಯಾ ನದಾಫ್ ಸೇರಿದಂತೆ ನೂರಾರು ಪಾಲಕರು ಪಾಲ್ಗೊಂಡಿದ್ದರು.


