ಹುಬ್ಬಳ್ಳಿ:- ಬಂಧಿಸಲು ತೆರಳಿದ ಪೋಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಇಬ್ಬರು ಕೊಲೆ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹೊಡೆದು ಬಂಧಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ಜರುಗಿದೆ.
ಹುಬ್ಬಳ್ಳಿ ನಗರದ ಮಂಟೂರು ರೋಡ್ ನಿವಾಸಿಗಳಾದ ಬಾಲರಾಜ್ ಅಲಿಯಾಸ್ ಬಂಗಾರ ಬಾಲ್ಯಾ ಹಾಗೂ ಮಹ್ಮದ್ ಶೇಖ್ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಮೊನ್ನೆ ಜನನಿಬಿಡ ಪ್ರದೇಶದಲ್ಲಿ ರೌಡಿಗಳು ಅಟ್ಟಹಾಸ ಮೆರೆದಿದ್ದರು. ಯುವಕನೋರ್ವನ ಮೇಲೆ ದಾಳಿ ಮಾಡಿ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಕೊಲೆ ಆರೋಪಿಗಳಿಗೆ ಇದೀಗ ಪೊಲೀಸರು ಗುಂಡು ಹಾರಿಸುವ ಮೂಲಕ ಬಿಸಿ ಮುಟ್ಟಿಸಿದ್ದು, ಆಸ್ಪತ್ರೆಗೆ ಸೇರಿಸಿದ್ದಾರೆ.
ಇಂದು ಮುಂಜಾನೆ 6 ಗಂಟೆ ಸಮಯಕ್ಕೆ ಹುಬ್ಬಳ್ಳಿ ನಗರದ ಹೊರವಲಯದ ಮಂಟೂರು ರಸ್ತೆಯಲ್ಲಿ ಪೊಲೀಸರು ತಮ್ಮ ಸರ್ವಿಸ್ ರಿವಾಲ್ವರ್ಗೆ ಅನಿವಾರ್ಯವಾಗಿ ಕೆಲಸ ನೀಡಿದ್ದಾರೆ. ರೌಡಿಗಳು ತಮ್ಮ ಮೇಲೆಯೇ ಹಲ್ಲೆ ಮಾಡಿ ತಪ್ಪಿಸಿಕೊಂಡು ಹೋಗಲು ಮುಂದಾದಾಗ, ಗುಂಡು ಹಾರಿಸಿದ್ದಾರೆ. ಮೊದಲಿಗೆ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಆರೋಪಿಗಳಿಗೆ ವಾರ್ನಿಂಗ್ ನೀಡಿದ್ದರು ಕೂಡ ಕೇಳದೆ ಇದ್ದಾಗ, ಬೆಂಡಿಗೇರಿ ಠಾಣೆಯ ಇನ್ಸಪೆಕ್ಟರ್ ಎಸ್ ಆರ್ ನಾಯಕ್, ನಾಲ್ಕು ಸುತ್ತು ಗುಂಡು ಹಾರಿಸಿದ್ದು, ಬಂಗಾರ ಬಾಲ್ಯಾ ಮತ್ತು ಮಹ್ಮದ್ ಶೇಖ್ ಕಾಲಿಗೆ ಗುಂಡು ತಗುಲಿವೆ.
ಗಾಯಗೊಂಡಿರುವ ಮಹ್ಮದ್ ಶೇಖ್ ಮತ್ತು ಬಂಗಾರ ಬಾಲ್ಯಾನನ್ನು ಕಿಮ್ಸ್ಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಸಿಪಿಐ ಎಸ್ ಆರ್ ನಾಯಕ್ ಮತ್ತು ಇನ್ನಿಬ್ಬರು ಕಾನ್ಸಟೇಬಲ್ಗಳನ್ನ ಕೂಡ ಕಿಮ್ಸ್ಗೆ ದಾಖಲಿಸಲಾಗಿದೆ. ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.



