ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಭಿನ್ನ ನಟನಾ ಶೈಲಿ ಮತ್ತು ಅದ್ಭುತ ಹಾಸ್ಯಪ್ರದರ್ಶನಗಳ ಮೂಲಕ “ನವರಸ ನಾಯಕ” ಎಂಬ ವಿಶಿಷ್ಟ ಗುರುತನ್ನು ಪಡೆದಿರುವ ಜಗ್ಗೇಶ್, ಈ ವರ್ಷ ತಮ್ಮ ಚಂದನವನ ಪ್ರವೇಶದ 45ನೇ ವರ್ಷ ಪೂರೈಸಿದ್ದಾರೆ. 1980ರಲ್ಲಿ ‘ಕನ್ನಡತಿ ಮಾನವತಿ’ ಚಿತ್ರದ ಮೂಲಕ ಸಿನಿರಂಗ ಪ್ರವೇಶಿಸಿದ ಜಗ್ಗೇಶ್, ಚಿತ್ರ ಬಿಡುಗಡೆಯಾಗದಿದ್ದರೂ ತಮ್ಮ ಪ್ರಯಾಣವನ್ನು ನಿಲ್ಲಿಸಲಿಲ್ಲ. ಆರಂಭಿಕ ಅಡೆತಡೆಗಳನ್ನು ದಾಟಿ, ತಮ್ಮ ಹಾಸ್ಯ ಕೌಶಲ್ಯದಿಂದ ಕನ್ನಡಿಗರನ್ನು ನಗೆಗಡಲಲ್ಲಿ ತೇಲಿಸಿ, ಕಾಮಿಡಿ ಪಾತ್ರಗಳ ಮೂಲಕ ಭಾರಿ ಜನಪ್ರಿಯತೆ ಗಳಿಸಿದರು.
ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ಕನ್ನಡ ಸಿನಿರಂಗಕ್ಕೆ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಜಗ್ಗೇಶ್, ತಮ್ಮ ಈ 45 ವರ್ಷದ ಕಲಾಜೀವನದ ಸೇವೆಯನ್ನು ಸ್ಮರಿಸಿ ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಷಿ ಬರಹವೊಂದನ್ನು ಹಂಚಿಕೊಂಡಿದ್ದಾರೆ.
”1980 ನವೆಂಬರ್ 17ನೇ ತಾರೀಖು. ಆಗ ನನಗೆ 18 ವರ್ಷ ವಯಸ್ಸು. ನಾನು ಬಣ್ಣ ಹಚ್ಚಿ ನಟಿಸಿದ ಚಿತ್ರ ಕನ್ನಡತಿ ಮಾನವತಿ. ಸ್ಥಳ ಗುಬ್ಬಿ ಚನ್ನಬಸವೇಶ್ವರ ಆಲಯ. ಬಣ್ಣ ಹಚ್ಚಿದವರು ಅಂಬರೀಶ್ ಅವರ ಮೇಕಪ್ ಮಾಡುತ್ತಿದ್ದ ರಾಮಕೃಷ್ಣ ಹಾಗೂ ಅವರ ಶಿಷ್ಯ ಕೃಷ್ಣ. ಪಾತ್ರ ಕೊಡಿಸಿದವರು ನನ್ನ ಮಿತ್ರ ಶಂಭು. ನನಗೆ ಮೀಸೆ ಬರೆದವರು ಹಾಸ್ಯನಟ ರನ್ನಾಕರ್. ಚಿತ್ರದ ನಾಯಕ ರಾಮಕೃಷ್ಣ. ನಾಯಕಿ ಪ್ರಮೀಳಾ ಜೋಷಾಯ್. ನನ್ನ ಜೊತೆ ನಟಿಸಿದ ನಟಿ ಸಿಹಿಕಹಿ ಗೀತ ಅಕ್ಕ. ಚಿತ್ರ ಬಿಡುಗಡೆ ಆಗಲಿಲ್ಲಾ!”.
”ನನ್ನ ಅದೃಷ್ಟ, ನಿರ್ದೇಶಕ ಸಿದ್ದಲಿಂಗಯ್ಯ ಅವರ ಮಗ ಮುರಳಿ ಅವರ ಚಿತ್ರ ಬಿಳಿ ಗುಲಾಬಿ ಸಿಗಲು ಕಾರಣವಾದರು ಪುಟ್ಟಣ್ಣ ಕಣಗಲ್ ಅವರ ಸಹಾಯಕ ನಿರ್ದೇಶಕ ದಿವಂಗತ ಅರಕಲಗೂಡು ನಂಜುಂಡ. ನಂತರ ಕೆವಿ.ಜಯರಾಂ ಅವರ ಕೃಪೆಯಿಂದ ಅವರ “ಇಬ್ಬನಿ ಕರಗಿತು” ಸಿನಿಮಾದಲ್ಲಿ ಮುಂದುವರೆದು, 1984ರಲ್ಲಿ “ಶ್ವೇತ ಗುಲಾಬಿ” ಚಿತ್ರದ ಅವಕಾಶ ಸಿಕ್ಕು ನಂತರ ಪರಿಮಳ ನಾನು ಮದುವೆಯಾಗಿ ಸ್ಟೇಷನ್ ಸುಪ್ರೀಮ್ ಕೋರ್ಟು ಅವಾಂತರ ಮುಗಿಸಿ ನಂತರ ಹಿಂದೆ ನೋಡದೇ ರಾಯರ ಕೃಪೆಯಿಂದ ಅಂದಿನ ಕನ್ನಡ ಪ್ರೇಕ್ಷಕರ ಪ್ರೀತಿ ಚಪ್ಪಾಳೆಯಿಂದ ವಿವಿಧ ಪಾತ್ರ ಮಾಡುತ್ತಾ ಬೆಳೆದು ನಿಂತೆ”.
”ಇಂದಿಗೆ ನನ್ನ ಸಿನಿಮಾ ಪ್ರಯಾಣಕ್ಕೆ 45 ವರ್ಷ ಆಯುಷ್ಯ. ನಡೆದು ಬಂದ ದಾರಿ ನೆನಪಿನ ಬುತ್ತಿ. ಮುಂದೆಯು ನಿಮ್ಮ ಪ್ರೀತಿ ನನ್ನ ಮೇಲಿರಲಿ. ನನ್ನಂತೆ ಮುಂದೆ ಚಿತ್ರರಂಗಕ್ಕೆ ಬರುವ ಹೊಸ ಕಲಾವಿದರನ್ನು ಹರಸಿ ಬೆಳೆಸಿ” ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಆರಂಭಿಕ ವೃತ್ತಿಜೀವನದ ಸಂದರ್ಭದ ಫೋಟೋವನ್ನೂ ಹಂಚಿಕೊಂಡಿದ್ದಾರೆ.



