ಚಿಕ್ಕಬಳ್ಳಾಪುರ:- ನಗರದ ವಾಪಸಂದ್ರ ಬ್ರಿಡ್ಜ್ ಬಳಿ ಹೈವೇಯಲ್ಲಿ ಅಡ್ಡಾದಿಡ್ಡಿ ಸ್ಕೂಟಿ ಚಾಲನೆ ಮಾಡುತ್ತಿದ್ದದ್ದನ್ನು ಪ್ರಶ್ನೆ ಮಾಡಿದಕ್ಕೆ ಬೈಕ್ ಸವಾರನಿಗೆ ಮಹಿಳಾ ಟೆಕ್ಕಿ ಚಾಕುವಿನಿಂದ ಇರಿದಿರುವಂತಹ ಘಟನೆ ಜರುಗಿದೆ.
ರಿಂಬಿಕಾ ಎಂಬ ಮಹಿಳಾ ಟೆಕ್ಕಿಯಿಂದ ಕೃತ್ಯವೆಸಗಲಾಗಿದೆ. ಬೈಕ್ ಸವಾರ ನರಸಿಂಹ ಮೂರ್ತಿ ಕೈಗೆ ಗಾಯವಾಗಿದೆ. ಗಾಯಾಳುವನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಮಿಳುನಾಡಿನವರಾದ ರಿಂಬಿಕಾ, ಬೆಂಗಳೂರಿನಲ್ಲಿ ಟಿಕ್ಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಇಂದು ತಮ್ಮ ತಮಿಳುನಾಡು ನೊಂದಣಿಯ ಸ್ಕೂಟಿ ಏರಿ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಕಡೆಗೆ ಬಂದು ವಾಪಾಸ್ ಬೆಂಗಳೂರಿನತ್ತ ತೆರಳುತ್ತಿದ್ದರು. ಆದರೆ ಅದ್ಯಾಕೋ ಏನೋ ಬೆಂಗಳೂರು-ಹೈದರಾಬಾದ್ ಹೈವೇಯಲ್ಲಿ ಅಡ್ಡಾದಿಡ್ಡಿಯಾಗಿ ಸ್ಕೂಟಿ ಓಡಿಸುತ್ತಾ ಹಿಂದೆ ಬರ್ತಿದ್ದ ಸವಾರರಿಗೆ ಇರುಸು ಮುರುಸು ಉಂಟು ಮಾಡಿದ್ದಾರೆ.
ಚಿಕ್ಕಬಳ್ಳಾಪುರದ ಸೇತುವೆ ಕೆಳಗಡೆ ಸ್ಕೂಟಿ ನಿಲ್ಲಿಸಿ ನಿಂತಿದ್ದ ರಿಂಬಿಕಾರನ್ನು ಹಿಂದೆ ಬರ್ತಿದ್ದ ಬೈಕ್ ಸವಾರ ನಿಖಿಲ್ ಹಾಗೂ ನರಸಿಂಹಮೂರ್ತಿ ಅವರು ಪ್ರಶ್ನೆ ಮಾಡಿದ್ದಾರೆ. ಯಾಕಮ್ಮ ಗಾಡಿ ಅಡ್ಡಾದಿಡ್ಡಿ ಓಡಿಸ್ತಿದ್ದೀಯಾ? ಅಂದಿದ್ದೇ ತಡ ಆಕೆ ಬಳಿ ಇದ್ದ ಫೋಲ್ಡೆಡ್ ಚಾಕುವಿನಿಂದ ಅಟ್ಯಾಕ್ ಮಾಡಿದ್ದಾರೆ. ಇದ್ರಿಂದ ಬೈಕ್ ಸವಾರ ನಿಖಿಲ್ ಕೈಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವವಾಗಿದೆ. ಹಿಂಬದಿ ಸವಾರ ನರಸಿಂಹಮೂರ್ತಿಗೂ ಗಾಯವಾಗಿದೆ. ರಿಂಬಿಕಾ ಚಾಕುವಿನಿಂದ ಅಟ್ಯಾಕ್ ಮಾಡ್ತಿದ್ದಂತೆ ನಿಖಿಲ್ ಸಹ ವಾಪಸ್ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ. ಈ ಎಲ್ಲಾ ದೃಶ್ಯಗಳು ಸ್ಥಳೀಯ ಹೋಟೆಲ್ವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.



