ವಿಜಯಸಾಕ್ಷಿ ಸುದ್ದಿ, ಗದಗ: ನಶಾ ಮುಕ್ತ ಭಾರತ ಅಭಿಯಾನ ಯೋಜನೆಯ 5ನೇ ವಾರ್ಷಿಕೋತ್ಸವ ಆಚರಣೆ ನಿಮಿತ್ತ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ಜರುಗಿತು.
ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್ ಮಾತನಾಡಿ, ಯುವಕರು ಪ್ರತಿ ರಾಷ್ಟ್ರದ ಶಕ್ತಿ ಮತ್ತು ಯುವ ಶಕ್ತಿಯು ಸಮಾಜ, ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಕೊಡುಗೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ದೇಶವನ್ನು ಮಾದಕ ವಸ್ತು ವ್ಯಸನದಿಂದ ಮುಕ್ತಗೊಳಿಸಲು ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡುತ್ತೇವೆ ಎನ್ನುವ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ನಶೆ ಮನುಷ್ಯನ ಬದುಕನ್ನೇ ಬಲಿ ತೆಗೆದುಕೊಳ್ಳುವ ಮಹಾ ವ್ಯಸನ. ಯುವ ಪೀಳಿಗೆಯನ್ನು ರಕ್ಷಿಸಲು ನಶಾಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಸಮೂಹ ಹೊಣೆಗಾರಿಕೆಯಾಗಿದೆ. ಶಾಲಾ-ಕಾಲೇಜುಗಳಲ್ಲಿ ನಶಾಮುಕ್ತ ಭಾರತ ಅಭಿಯಾನ ಏರ್ಪಡಿಸಿ ಅಲ್ಲಿ ‘ಮಾದಕ ದ್ರವ್ಯ ಸೇವನೆಗೆ ಬೇಡ ಹೇಳೋಣ, ಸ್ವಸ್ಥ ಜೀವನ–ನಶಾಮುಕ್ತ ಸಮಾಜ, ಡ್ರಗ್ಸ್‌ಗೆ ದೂರ, ಆರೋಗ್ಯಯುತ ಜೀವನ ನಮ್ಮದಾಗಿಸೋಣ’ ಮೊದಲಾದ ಘೋಷಣೆಗಳನ್ನು ಕೂಗಿ ಜನರಲ್ಲಿ ಜಾಗೃತಿ ಮೂಡಿಸಲು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಯೋಜನಾಧಿಕಾರಿ ಎ.ಎ. ಕಂಬಾಳಿಮಠ, ಸಶಸ್ತ್ರ ಮೀಸಲು ಪಡೆ ಡಿವೈಎಸ್‌ಪಿ ವಿದ್ಯಾನಂದ ನಾಯಕ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಬಿ. ಮಸನಾಯಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾವತಿ ಜಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ನಂದಾ ಹಣಬರಟ್ಟಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಅಮಿತ ಬಿದರಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಮಹಾಂತೇಶ್ ಕೆ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಹಬೂಬ ತುಂಬರಮಟ್ಟಿ, ಆರೋಗ್ಯ ಇಲಾಖೆಯ ರೂಪಸೇನ ಚವ್ಹಾಣ, ವಿವಿಧ ಇಲಾಖೆ ಅಧಿಕಾರಿಗಳು, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಪ್ರತಿನಿಧಿಗಳು ಹಾಜರಿದ್ದರು.
ಶಾಲಾ-ಕಾಲೇಜುಗಳಲ್ಲಿ ನಶಾ ವಿರೋಧಿ ಶಪಥ ಕಾರ್ಯಕ್ರಮ, ಬೃಹತ್ ಜಾಗೃತಿ ಪೋಸ್ಟರ್ ಹಾಗೂ ರಂಗಭೂಮಿ ಪ್ರದರ್ಶನಗಳ ಮೂಲಕ ಯುವಕರನ್ನು ನಶೆಯ ದಾರಿಯಿಂದ ತಿರುಗಿಸಬೇಕೆಂದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕರೆ ನೀಡಿದರು.


