ಮಹಾಯಾಗದಿಂದ ಲೋಕ ಕಲ್ಯಾಣವಾಗಲಿದೆ: ಮಹಾಂತ ಸಹದೇವಾನಂದ ಗಿರಿಜಿ ಮಹಾರಾಜರು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಅತಿರುದ್ರ ಯಾಗ ಎಂದರೆ ಕೊನೆ ಇಲ್ಲದ ಯಾಗ ಎಂದರ್ಥ. ಗದಗಿನ ಜನತೆಯ ಸಂಕಲ್ಪದಿಂದ ಮಾಡಿದ ಈ ಮಹಾಯಾಗ ಮುಂದಿನ ದಿನಗಳಲ್ಲಿ ಸ್ಮರಣೀಯವಾಗಲಿದೆ. ಇಲ್ಲಿನ ಜನತೆಯನ್ನು ಶಿವನು ಸದಾ ರಕ್ಷಣೆ ಮಾಡುವನು ಎಂದು ನಾಗಾಸಾಧು ಮಹಾಂತ ಸಹದೇವಾನಂದ ಗಿರಿಜಿ ಮಹಾರಾಜರು ಹೇಳಿದರು.

Advertisement

ನಗರದ ವಿದ್ಯಾದಾನ ಸಮಿತಿಯ ಮೈದಾನದಲ್ಲಿ ನ. 11ರಿಂದ 18ರವರೆಗೆ ಜರುಗಿದ ಅತಿರುದ್ರ ಮಹಾಯಾಗ ಮತ್ತು ಕಿರಿಯ ಕುಂಭಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ಈ ಮಹಾಯಾಗ ವೈಯಕ್ತಿಕವಾಗದೆ ಲೋಕಕಲ್ಯಾಣಕ್ಕಾಗಿ ಮಾಡಲಾಗಿದೆ. ಈ ಮಹಾಯಾಗದಲ್ಲಿ ಸೇವೆ ಸಲ್ಲಿಸಿದ ಪ್ರತಿಯೊಬ್ಬರಿಗೂ ಶಿವನು ಒಳ್ಳೆಯದನ್ನೇ ಮಾಡುತ್ತಾನೆ. ಎಲ್ಲರೂ ಶಕ್ತಿಮೀರಿ ಸೇವೆ ಮಾಡಿದ್ದಾರೆ. ನಮ್ಮ ಪೂರ್ವಜನ್ಮದ ಪುಣ್ಯದ ಫಲವಾಗಿ ಶಿವನು ನಾವೆಲ್ಲರೂ ಈ ಮಹಾಯಾಗದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಾನೆ. ಇಲ್ಲಿ ನಡೆದ ಮಹಾಯಾಗ ಗದಗಿನ ಜನತೆಯ ಕಲ್ಯಾಣಕ್ಕಾಗಿ ಮಾತ್ರವಲ್ಲ, ಇದು ಜಿಲ್ಲೆ, ರಾಜ್ಯ, ರಷ್್ಟ್ರಕ್ಕೆ, ಇಡೀ ಜಗತ್ತಿನ ಕಲ್ಯಾಣಕ್ಕಾಗಿ ನಡೆದಿದೆ ಎಂದು ಹೇಳಿದರು.

ಮಣಕವಾಡದ ಪೂಜ್ಯಶ್ರೀ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ಮಾತನಾಡಿ, ಸಂತರ ಆಗಮನ ವಸಂತದ ಆಗಮನವಾದಂತೆ. ವಸಂತದ ಗಾಳಿ ಬಾಡಿದ ಗಿಡದಲ್ಲಿ ಚಿಗುರು ಮೂಡಿಸುವಂತೆ ಸಾಧು-ಸಂತರುಗಳು ಸತ್ತಂತಿರುವ ಜನರ ಬದುಕನ್ನು ಹಸನುಗೊಳಿಸುತ್ತಾರೆ. ಯಾಗವು ಸಮಸ್ತ ಲೋಕ ಕಲ್ಯಾಣಕ್ಕಾಗಿ ಜನರಿಗೆ ಸುಖ, ಶಾಂತಿ ನೀಡಲಿ ಎಂಬ ಉದ್ದೇಶದ್ದಾಗಿರುತ್ತದೆ. ಯಜ್ಞದಿಂದ ಹೊರಹೊಮ್ಮಿದ ಹೊಗೆಯು ಪರಿಸರವನ್ನು ಉತ್ತಮಗೊಳಿಸುತ್ತದೆ ಎಂದು ಹೇಳಿದರು.

ವಿ.ಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಈ ಕಾರ್ಯಕ್ರಮ ಯಶಸ್ವಿಯಾಗಲು ಮಹಿಳೆಯರ ಕುಂಭಮೇಳವು ಪ್ರಮುಖ ಪಾತ್ರ ವಹಿಸಿದೆ. ಈ ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಿದವರು ಸ್ವಾರ್ಥಕ್ಕಾಗಿ ಅಲ್ಲ, ಲೋಕಕಲ್ಯಾಣಕ್ಕಾಗಿ ತನು-ಮನ-ಧನದಿಂದ ಸೇವೆ ಮಾಡಿದ್ದಾರೆ. ದೇಶದ ಸಂಸ್ಕೃತಿಯನ್ನು ಹಾಳು ಮಾಡಲು ಸಾಕಷ್ಟು ಜನರು ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಿಲ್ಲ ಅಂತಹ ಪವಿತ್ರ ಹಿಂದೂ ಧರ್ಮವನ್ನು ನಾವೆಲ್ಲರೂ ಉಳಿಸಿಕೊಂಡು ಹೋಗಬೇಕಾಗಿದೆ ಎಂದು ಹೇಳಿದರು.

ಸೇವಾ ಸಮಿತಿಯ ಅಧ್ಯಕ್ಷ ಕಿರಣ ಭೂಮಾ ಮಾತನಾಡಿ, ಗದಗಿನಲ್ಲಿ 8 ದಿನಗಳವರೆಗೆ ನಡೆದ ಕುಂಭಮೇಳ ಇತಿಹಾಸ ನಿರ್ಮಿಸಿದೆ. ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಎಲ್ಲರೂ ಕೆಲಸ ಮಾಡಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಹಾಂತ ಪೂಜ್ಯಶ್ರೀ ಸಹದೇವಾನಂದ ಗಿರಿ ಜಿ ಮಹಾರಾಜರು ನೇತೃತ್ವ, ಶಿರೋಳ ಮಠದ ಪೂಜ್ಯಶ್ರೀ ಯಚ್ಚರೇಶ್ವರ ಮಹಾಸ್ವಾಮಿಗಳು ಸಮ್ಮುಖವಹಿಸಿದ್ದರು. ಈ ಸಂದರ್ಭದಲ್ಲಿ ಸೇವಾ ಸಮಿತಿಯ ಪದಾಧಿಕಾರಿಗಳಾದ ಸದಾಶಿವಯ್ಯ ಮದರಿಮಠ, ಎಸ್.ಎಚ್. ಶಿವನಗೌಡರ, ರವಿ ದಂಡಿನ, ಫಕ್ಕೀರಸಾ ಭಾಂಡಗೆ, ಬಿ.ಬಿ. ಅಸೂಟಿ, ರಾಜು ಕುರಡಗಿ, ಬಸವರಾಜ ಬಿಂಗಿ, ವಿ.ಕೆ. ಗುರುಮಠ, ಪ್ರಕಾಶ ಬೊಮ್ಮನಹಳ್ಳಿ, ಗೋಪಾಲ ಅಗರವಾಲ, ಅವಿನಾಶ ಜೈನ, ವೆಂಕಟೇಶ ಕುಲಕರ್ಣಿ, ಲಿಂಗರಾಜ ಗುಡಿಮನಿ, ರಾಘವೇಂದ್ರ ಬರಾಡ, ಸಂತೋಷ ಚನ್ನಪ್ಪನವರ, ನಾರಾಯಣ ಕುಡತರಕರ, ರವಿ ಗುಂಜೀಕರ, ರಮೇಶ್ ಸಜ್ಜಗಾರ, ವಿಜಯಲಕ್ಷ್ಮಿ ಮಾನ್ವಿ, ಪ್ರೀತಿ ಹೊನಗುಡಿ, ಅನುರಾಧಾ ಬಸವಾ, ಮೇಘಾ ಮುದಗಲ್ ಮುಂತಾದವರು ಉಪಸ್ಥಿತರಿದ್ದರು.

ಅತಿರುದ್ರ ಮಹಾಯಾಗ ಸೇವಾ ಸಮಿತಿಯ ಗೌರವಾಧ್ಯಕ್ಷರು ಹಾಗೂ ನರಗುಂದ ಶಾಸಕರಾದ ಸಿ.ಸಿ. ಪಾಟೀಲ ಮಾತನಾಡಿ, ಗದಗಿನಲ್ಲಿ ನಡೆದ ಅತಿರುದ್ರ ಮಹಾಯಾಗ, ಕಿರಿಯ ಕುಂಭಮೇಳವು ಯಶಸ್ವಿಯಾಗಿ ನಡೆಯಲು ಪೂಜ್ಯಶ್ರೀ ಮಹಾಂತ ಸಹದೇವಾನಂದ ಗಿರಿ ಜಿ ಮಹಾರಾಜರು ಕಾರಣರಾಗಿದ್ದಾರೆ. ಇದೊಂದು ನನ್ನ ಜೀವನದ ಅವಿಸ್ಮರಣೆಯ ದಿನವಾಗಿದೆ. ಗದಗಿನ ಜನತೆ ಎಂಟು ದಿನಗಳವರೆಗೆ ಲೌಕಿಕ ಜಗತ್ತನ್ನು ತೊರೆದು ದೇವಲೋಕದಲ್ಲಿ ಇದ್ದಂತೆ ವಾತಾವರಣ ನಿರ್ಮಾಣವಾಗಿತ್ತು. ಸನಾತನ ಧರ್ಮ, ಹಿಂದೂ ಸಂಸ್ಕೃತಿ ಉಳಿಯಬೇಕಾದರೆ ಸಾಧು-ಸಂತರ ಮಾರ್ಗದರ್ಶನ ಅಗತ್ಯವಿದೆ. ಭಕ್ತರು ಇಲ್ಲಿ ಕಲಿತ ಸಂಸ್ಕಾರವನ್ನು ಮನೆಯಲ್ಲಿ ಮಕ್ಕಳಿಗೆ ಮುಂದುವರೆಸಬೇಕು ಎಂದು ಹೇಳಿದರು.

 


Spread the love

LEAVE A REPLY

Please enter your comment!
Please enter your name here