ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ ನಿಯಂತ್ರಣ ಕುರಿತು ಗದಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಮಟ್ಟದ ಸಭೆ ಜರುಗಿತು. ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೀದಿ ನಾಯಿಗಳಿಂದ ಉಂಟಾಗುತ್ತಿರುವ ಸಮಸ್ಯೆಗಳು ಹಾಗೂ ಅವುಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಬೀದಿ ನಾಯಿಗಳ ನಿಯಂತ್ರಣ ಎಂದರೆ ಅವುಗಳನ್ನು ಕೊಲ್ಲುವುದು ಅಲ್ಲ, ಮಾನವೀಯ ಮತ್ತು ಕಾನೂನುಬದ್ಧ ರೀತಿಯಲ್ಲಿ ಜನರ ಜೀವ, ಆರೋಗ್ಯ၊ ಸುರಕ್ಷತೆ ಕಾಪಾಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಬೀದಿ ನಾಯಿಗಳಿಂದ ಮಕ್ಕಳಿಗೂ, ಮಹಿಳೆಯರಿಗೂ, ಹಿರಿಯ ನಾಗರಿಕರಿಗೂ ಅಪಾಯ ಉಂಟಾಗುತ್ತಿರುವ ಘಟನೆಗಳು ಕೆಲವೆಡೆ ವರದಿಯಾಗಿರುವ ಹಿನ್ನೆಲೆಯಲ್ಲಿ, ಸಮಸ್ಯೆ ಗಂಭೀರವಾಗುವ ಮುನ್ನ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಸೂಚಿಸಿದರು.
ಬೀದಿ ನಾಯಿಗಳನ್ನು ಸುರಕ್ಷಿತವಾಗಿ ವಶಪಡಿಸಿಕೊಳ್ಳಲು ವಿಶೇಷ ತಂಡ ರಚನೆ, ಅವುಗಳಿಗೆ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ, ರೇಬಿಸ್ ಲಸಿಕೆ, ಆರೋಗ್ಯ ತಪಾಸಣೆ ನಡೆಸಿ, ಗುರುತು ಹಾಕಿ ಹಿಂದಿರುಗಿ ಬಿಡುವ ಬಗ್ಗೆ ಪ್ರಾಥಮಿಕ ತೀರ್ಮಾನ ಕೈಗೊಳ್ಳಲಾಯಿತು. ಜೊತೆಗೆ ಹುಚ್ಚುನಾಯಿ ಶಂಕೆ ಇರುವ ನಾಯಿಗಳನ್ನು ಪ್ರತ್ಯೇಕವಾಗಿ ವಶಕ್ಕೆ ಪಡೆದು ಅಗತ್ಯ ವೈದ್ಯಕೀಯ ಪರೀಕ್ಷೆ ನಡೆಸುವ ವಿಷಯದಲ್ಲೂ ನಿರ್ದೇಶನ ನೀಡಲಾಯಿತು.
ಜಿಲ್ಲೆಯಾದ್ಯಂತ ಕಸದ ಸಮರ್ಪಕ ನಿರ್ವಹಣೆ ಇಲ್ಲದಿರುವುದು ಬೀದಿ ನಾಯಿಗಳ ಹೆಚ್ಚುವಿಕೆಗೆ ಪ್ರಮುಖ ಕಾರಣವಾಗಿದ್ದು, ಮಾರುಕಟ್ಟೆ, ಹೋಟೆಲ್, ಮಾಂಸದ ಅಂಗಡಿಗಳು, ಸಾರ್ವಜನಿಕ ಸ್ಥಳಗಳ ತ್ಯಾಜ್ಯವನ್ನು ಮುಚ್ಚಿದ ಡಬ್ಬಿಗಳಲ್ಲಿ ಸಂಗ್ರಹಿಸುವ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಲು ಸಭೆ ತೀರ್ಮಾನಿಸಿತು. ನಿಯಮ ಉಲ್ಲಂಘಿಸುವ ವಾಣಿಜ್ಯ ಸಂಸ್ಥೆಗಳ ವಿರುದ್ಧ ದಂಡ ವಿಧಿಸಲು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಯಿತು.
ಶಾಲೆಗಳು, ಆಂಗನವಾಡಿಗಳು, ಗ್ರಾಮ ಸಭೆಗಳು, ಮಹಿಳಾ ಸಂಘಗಳ ಮೂಲಕ ನಾಯಿ ಕಚ್ಚಿದರೆ ತಕ್ಷಣ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ರೇಬಿಸ್ ಲಸಿಕೆಯ ಮಹತ್ವ ಕುರಿತು ಜಾಗೃತಿ ಮೂಡಿಸುವ ನಿರ್ಧಾರ ಕೈಗೊಳ್ಳಲಾಯಿತು.
ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳು ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಸಮಗ್ರ ಕಾರ್ಯಯೋಜನೆ ತಯಾರಿಸಿ, ನಿಗದಿತ ಅವಧಿಯಲ್ಲಿ ವರದಿ ಸಲ್ಲಿಸಲು ಒಪ್ಪಿಕೊಂಡರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಸ್. ನೀಲಗುಂದ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟೂರ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಎಚ್.ಬಿ. ಹುಲಗಣ್ಣವರ, ಜಿ.ಪಂ ಸಹಕಾರ್ಯದರ್ಶಿ ಶಿವಾನಂದ ಕಲ್ಮನಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.
ಜಿಲ್ಲೆಯಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಮನ್ವಯದೊಂದಿಗೆ ಬೀದಿ ನಾಯಿ ಜನನ ನಿಯಂತ್ರಣ (ಎಬಿಸಿ ಪ್ರಕ್ರಿಯೆ) ಕಾರ್ಯಕ್ರಮವನ್ನು ಹಂತ ಹಂತವಾಗಿ ಜಾರಿಗೆ ತರಲು ಜಿಲ್ಲಾಧಿಕಾರಿಗಳು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.


