ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕದಲ್ಲಿ ಸಚಿವ ಸಂಪುಟ ಪುನರ್‌ರಚನೆ ಆದರೆ ಕಿತ್ತೂರ ಕರ್ನಾಟಕ ಭಾಗದ ಸ್ಥಳೀಯ ಮುಸ್ಲಿಂ ಶಾಸಕರಿಗೆ ಆದ್ಯತೆ ನೀಡಬೇಕೆಂದು ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ರಾಜ್ಯಾಧ್ಯಕ್ಷ ಮೊಹಮ್ಮದ್‌ಶಫಿ ಎಸ್. ನಾಗರಕಟ್ಟೆ ಆಗ್ರಹಿಸಿದ್ದಾರೆ.
ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಾ, ಕಳೆದ 70 ವರ್ಷಗಳಿಂದ ಕಿತ್ತೂರ ಕರ್ನಾಟಕ ಭಾಗದ ಮುಸ್ಲಿಂ ಶಾಸಕರಿಗೆ ಸಂಪುಟದಲ್ಲಿ ಸರಿಯಾದ ಪ್ರಾತಿನಿಧ್ಯ ಸಿಕ್ಕಿಲ್ಲ. ಕೇವಲ ಬೆಂಗಳೂರು ಸುತ್ತಮುತ್ತಲಿನ ಪ್ರದೇಶದ ಶಾಸಕರಿಗೆ, ವಿಶೇಷವಾಗಿ ದಕ್ಷಿಣ ಕರ್ನಾಟಕದ ಮುಸ್ಲಿಂ ಶಾಸಕರು ಸಂಪುಟದಲ್ಲಿ ಮಂತ್ರಿ ಆಗಿದ್ದಾರೆ. ಈ ಕಾರಣದಿಂದ ಕಿತ್ತೂರ ಕರ್ನಾಟಕದ ಮುಸ್ಲಿಮರು ರಾಜಕೀಯವಾಗಿ ಹಿಂದುಳಿಯಲು ಪ್ರಮುಖ ಕಾರಣವಾಗಿದೆ. ಕಿತ್ತೂರ ಕರ್ನಾಟಕ ಭಾಗದ ಮುಸ್ಲಿಂ ರಾಜಕಾರಣಿಗಳನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲಾಗಿದೆ. ಈ ಭಾಗದ ಮುಸ್ಲಿಮರು ಕೇವಲ ಮತ ಬ್ಯಾಂಕ್ ಆಗಿ ಉಳಿದುಬಿಟ್ಟಿದ್ದಾರೆ.
ಈ ಭಾಗದ ಮುಸ್ಲಿಂ ಶಾಸಕರಿಗೆ ಸಂಪುಟದಲ್ಲಿ ಮಂತ್ರಿ ಸ್ಥಾನ ಸಿಕ್ಕರೆ ಈ ಭಾಗದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ನಾವು ಬೆಂಗಳೂರಿನ ನಾಯಕರಿಗೆ ಮನ್ನಣೆ ಹಾಕಬೇಕಾಗುತ್ತದೆ. ಸಮಾಜದ ಪ್ರತಿಯೊಂದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬೆಂಗಳೂರಿಗೆ ಹೋಗುವ ಸಂದರ್ಭ ನಿರ್ಮಾಣವಾಗಿದೆ ಎಂದರು.
ಈ ಸಂದರ್ಭದಲ್ಲಿ ಗದಗ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿಗಳಾದ ಎಂ.ಡಿ. ಜಾಫರ್ ದಾಲಾಯತ್, ಆಸಿಫ್ ಜಮಾದಾರ್, ಅನೀಸ್ ಶೇಖ್, ಎಸ್.ಎಂ. ಮುಲ್ಲಾ, ಮೊಹಮ್ಮದ್ ಯೂನುಸ್ ಬಾಗಲಕೋಟ, ಇಮ್ರಾನ್ ಬೆಟಗೇರಿ, ಅಬ್ದುಲ್ ರಜಾಕ್ ಧಾರವಾಡ, ಸಲೀಂ ಪಠಾಣ್ ಮುಂತಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.


