ಬೆಂಗಳೂರು: ಪ್ರಕೃತಿಯನ್ನು ಪೂಜಿಸಿ ಆರಾಧಿಸುವ ನಾವುಗಳೇ ಅವುಗಳನ್ನು ರಕ್ಷಿಸಿಕೊಳ್ಳಬೇಕಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ನಮ್ಮ ಧರ್ಮದಲ್ಲಿ ಅರಳಿ ಮರ, ಬೇವಿನ ಮರ, ಬನ್ನಿ ಮರಕ್ಕೆ ಪೂಜೆ ಮಾಡುತ್ತೇವೆ. ಪ್ರಾಣಿಗಳನ್ನು ದೇವರ ವಾಹನಗಳೆಂದು ಪರಿಗಣಿಸಿದ್ದೇವೆ. ಇವುಗಳನ್ನು ನಾವು ಕಾಪಾಡಿಕೊಳ್ಳಬೇಕು. ನಮ್ಮ ಪರಿಸರ, ನೀರು, ಗಾಳಿ, ಬೆಳಕು ಶಾಶ್ವತವಾಗಿ ಇರುತ್ತವೆ. ನಾವುಗಳು ಇರಲಿ, ಇಲ್ಲದಿರಲಿ, ಇವುಗಳು ಹಾಗೆಯೇ ಇರುತ್ತವೆ. ನೀರು, ಗಾಳಿಗೆ ಬಣ್ಣ ಇಲ್ಲ. ನಾವು ಇವುಗಳನ್ನು ಕಾಪಾಡಿಕೊಂಡು ಹೋಗಬೇಕು.
ಪ್ರಕೃತಿ ನಿಯಮ ಎಲ್ಲರಿಗೂ ಒಂದೇ. ಸೂರ್ಯ ಹುಟ್ಟುವುದು, ಮುಳುಗುವುದು, ಗಾಳಿ ಯಾವ ದಿಕ್ಕಿನಲ್ಲಿ ಬೀಸಬೇಕು ಎಲ್ಲವೂ ಪ್ರಕೃತಿ ನಿಯಮ. ನಮ್ಮ ಕಾಲದಲ್ಲಿ ಬಾವಿ ಹಾಗೂ ಹೊಳೆಯಲ್ಲಿ ನೀರನ್ನು ತರುತ್ತಿದ್ದೆವು. ಈಗ ಒಂದು ಬಾಟೆಲ್ ನೀರು 30-40 ರೂ. ಲೀಟರ್ ಆಗಿದೆ. ಪರಿಶುದ್ಧ ನೀರು ಇಲ್ಲವಾದರೆ ನಾವು ಇರಲು ಸಾಧ್ಯವಿಲ್ಲ ಎಂದರು.
ನಾನು ಮೊನ್ನೆ ಮೂರು ದಿನ ದೆಹಲಿಗೆ ಹೋಗಿದ್ದೆ. ಆಗ ನನ್ನ ಪಿಎ ಎದೆ ಬಳಿ ಒಂದು ಪುಟ್ಟ ಯಂತ್ರ ಹಾಕಿದ್ದ, ನಾನು ಏನದು ಎಂದು ಕೇಳಿದೆ. ಅದಕ್ಕೆ ಅವರು ಇದು ಏರ್ ಪ್ಯೂರಿಫೈಯರ್ ಎಂದು ಹೇಳಿದರು. ದೆಹಲಿಯ ಗಾಳಿ ಸೇವಿಸಿದರೆ ಒಂದು ದಿನಕ್ಕೆ 14 ಸಿಗರೇಟ್ ಸೇದುವುದಕ್ಕೆ ಸಮವಾಗುವಷ್ಟು ಅಲ್ಲಿನ ವಾಯುಮಾಲಿನ್ಯ ಪರಿಸ್ಥಿತಿ ಇದೆ. ನಾವು ಬಹಳ ಪುಣ್ಯವಂತರು. ನಾವು ಪರಿಸರ ಕಾಪಾಡಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು.


