ಬೆಂಗಳೂರು:- ಬೆಂಗಳೂರಿನಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸುಳಿವು ಸಿಕ್ಕಿದ್ದು, ಶೀಘ್ರದಲ್ಲೇ ಬಂಧಿಸಲಾಗುತ್ತದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ನಗರದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳಿವು ಸಿಕ್ಕಿದ್ದು, ಆರೋಪಿಗಳನ್ನು ಹಿಡಿಯುತ್ತೇವೆ. ಎಟಿಎಂಗಳಿಗೆ ಹಣ ಹಾಕುವ ಮಾಹಿತಿಯನ್ನು ಆರೋಪಿಗಳಿಗೆ ನೀಡಿದ್ದಾರೆ. ಇದಕ್ಕೆ ಕಾರಣ ಏನು? ಮಾಹಿತಿ ಕೊಟ್ಟಿದ್ದು ಯಾರು? ಹಣ ಹಾಕುವವರಲ್ಲಿ ಯಾರಾದರೂ ಇದ್ದಾರೋ? ಎಂಬುದರ ಬಗ್ಗೆ ಈಗಷ್ಟೇ ಲೀಡ್ ಸಿಕ್ಕಿದೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದರು.
ಬೆಂಗಳೂರಿನಲ್ಲಿ ಹಾಡುಹಗಲೇ ಇಂತಹ ಘಟನೆ ನಡೆದಿಲ್ಲ. 7 ಕೋಟಿ ರೂ.ಗೂ ಹೆಚ್ಚು ಮೊತ್ತದ ಹಣ ರಾಬರಿಯಾಗಿದೆ. ವಾಹನ ಸಂಖ್ಯೆ ಎಲ್ಲದರ ಮಾಹಿತಿ ಸಿಕ್ಕಿದೆ. ಕೃತ್ಯ ಎಸಗಿದವರು ಇಲ್ಲಿಯವರಾ? ಹೊರ ರಾಜ್ಯದವರಾ? ತನಿಖೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿ ಸಿಕ್ಕಿದೆ. ತನಿಖೆಗೆ ಅಡ್ಡಿಯಾಗುವುದರಿಂದ ಎಲ್ಲ ಮಾಹಿತಿಯನ್ನು ಹಂಚಿಕೊಳ್ಳಲಾಗುವುದಿಲ್ಲ. ಖಂಡಿತವಾಗಿ ಅರೋಪಿಗಳನ್ನು ಅರೆಸ್ಟ್ ಮಾಡುತ್ತೇವೆ ಎಂದರು.


