ವಿಜಯಸಾಕ್ಷಿ ಸುದ್ದಿ, ಗದಗ: ಬೆಲೆ ಕುಸಿತದಿಂದ ಆಕ್ರೋಶಕ್ಕೊಳಗಾದ ರೈತರು ಪ್ರತಿಭಟನೆಯ ಹಾದಿ ಹಿಡಿಯುವುದು ಇತ್ತೀಚಿನ ವರ್ಷಗಳಲ್ಲಿ ಅನಿವಾರ್ಯವಾಗಿದ್ದು, ಜಿಲ್ಲೆಯ ಉಳ್ಳಾಗಡ್ಡಿ ಬೆಳೆಗಾರರು ದರ ಕುಸಿತದ ಹಿನ್ನೆಲೆಯಲ್ಲಿ ಆಕ್ರೋಶಗೊಂಡು ಗದಗಿನ ಎಪಿಎಂಸಿ ಪ್ರಾಂಗಣದಲ್ಲಿ ಪ್ರತಿಭಟನೆ ನಡೆಸಿದರು.
ಬುಧವಾರ ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು, ಉಳ್ಳಾಗಡ್ಡಿ ಮಾರಾಟಕ್ಕೆ ಮುಂದಾದರು. ಟೆಂಡರ್ ಪ್ರಕ್ರಿಯೆ ನಿಗದಿತ ಸಮಯಕ್ಕಿಂತ ಸ್ವಲ್ಪ ತಡವಾಗಿ ಆರಂಭವಾದರೂ, ಅತೀ ಕಡಿಮೆ ದರ ಘೋಷಣವಾಗುತ್ತಿದ್ದಂತೆ ರೈತರ ಆಕ್ರೋಶದ ಕಟ್ಟೆ ಒಡೆದಿತ್ತು.
ಇಡೀ ಮಾರುಕಟ್ಟೆಯ ಎಲ್ಲ ದಲಾಲಿ ಅಂಗಡಿಕಾರರು ಉದ್ದೇಶಪೂರ್ವಕವಾಗಿಯೇ ಉಳ್ಳಾಗಡ್ಡಿ ದರದಲ್ಲಿ ಭಾರೀ ಕುಸಿತ ಮಾಡಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿ, ದಲಾಲಿ ಅಂಗಡಿಗಳ ಮುಂದೆಯೇ ದಿಢೀರ್ ಪ್ರತಿಭಟನೆ ಕೈಗೊಂಡರು.
ಈ ಸಂದರ್ಭದಲ್ಲಿ ಈರುಳ್ಳಿ ಖರೀದಿದಾರರು-ರೈತರ ನಡುವಿನ ವಾಗ್ವಾದ ತಾರಕಕ್ಕೇರಿತು. ಒಂದೆರಡು ಅಂಗಡಿಗಳಲ್ಲಿ ಆರಂಭವಾದ ಪ್ರತಿಭಟನೆ ಕೆಲ ಹೊತ್ತಿನಲ್ಲಿಯೇ ಎಪಿಎಂಸಿ ತುಂಬೆಲ್ಲಾ ಹರಡಿ ಎಲ್ಲಾ ಅಂಗಡಿಗಳ ಮುಂದೆ ರೈತರು ಪ್ರತಿಭಟನೆ ಮಾಡುವುದಲ್ಲದೇ ಎಪಿಎಂಸಿ ಮುಖ್ಯ ರಸ್ತೆಗೆ ಆಗಮಿಸಿ ಪ್ರತಿಭಟನೆ ನಡೆಸಿ, ಕೂಡಲೇ ಮರು ಟೆಂಡರ್ ನಡೆಸುವಂತೆ ಒತ್ತಾಯಿಸಿದರು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸ್, ಎಪಿಎಂಸಿ ಅಧಿಕಾರಿಗಳು ರೈತರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಪಟ್ಟು ಬಿಡದ ರೈತರು ಗದಗ ಮಾರುಕಟ್ಟೆ ತುಂಬಾ ಮರು ಟೆಂಡರ್ ಮಾಡಬೇಕು, ಉತ್ತಮ ದರ ಕೊಡಬೇಕು ಎಂದು ಆಗ್ರಹಿಸಿದಾಗ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಗಿ ಕೆಲಕಾಲ ಈರುಳ್ಳಿ ಖರೀದಿ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿತು.
ಇನ್ನೊಂದೆಡೆ ಗದಗ ತಾಲೂಕಿನ ಕೋಟುಮಚಗಿ ಗ್ರಾಮದಲ್ಲೂ ರೈತರು ಬೆಂಬಲ ಬೆಲೆ, ಬೆಳೆ ಪರಿಹಾರ ಹಾಗೂ ರೈತರ ಹೊಲಗಳಿಗೆ ತೆರಳುವ ರಸ್ತೆ ಸುಧಾರಣೆ ಸಹಿತ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ರೈತ ಮುಖಂಡ, ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷ ಮುತ್ತನಗೌಡ ಚವಡರಡ್ಡಿ ಮಾತನಾಡಿ, ರೈತರು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ. ಸರಕಾರ ಈರುಳ್ಳಿಗೆ ಬೆಂಬಲ ಬೆಲೆ ಘೋಷಿಸಬೇಕು, ಮೆಕ್ಕೆಜೋಳ ಖರೀದಿ ಕೇಂದ್ರ ಶೀಘ್ರ ಪ್ರಾರಂಭಗೊಳ್ಳಬೇಕು. ರೈತರಿಗೆ ದೊರಕಬೇಕಾದ ಬೆಳೆ ಪರಿಹಾರ ಶೀಘ್ರ ದೊರಕಬೇಕು. ರೈತರ ಹೊಲವಾರಿ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಅವುಗಳ ದುರಸ್ತಿ ಕಾರ್ಯವಾಗಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಈ ಕುರಿತು ಸರಕಾರ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿ ಕ್ವಿಂಟಾಲ್ ಈರುಳ್ಳಿ ನೂರು ರೂಪಾಯಿಯಿಂದ ಕೇವಲ ಮುನ್ನೂರು ರೂಪಾಯಿವರೆಗೆ ಮಾರಾಟವಾಗುತ್ತಿದೆ. ಇಷ್ಟು ಕಡಿಮೆ ದರಕ್ಕೆ ಮಾರಾಟ ಮಾಡಿದರೆ ರೈತರಿಗೆ ಮಾರಾಟಕ್ಕೆ ಈರುಳ್ಳಿ ತಂದಿರುವ ವಾಹನದ ಬಾಡಿಗೆ ಕೊಡಲೂ ಸಾಧ್ಯವಾಗದು. ರಾಜ್ಯದ ಇತರೆ ಮಾರುಕಟ್ಟೆಗಳಲ್ಲಿ ಉತ್ತಮ ದರವಿದೆ. ಆದರೆ ಗದಗ ಮಾರುಕಟ್ಟೆಯಲ್ಲಿ ಮಾತ್ರ ಇಷ್ಟು ಕಡಿಮೆ ದರಕ್ಕೆ ಕೇಳುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ, ಸರ್ಕಾರ ಇತ್ತ ಗಮನ ಹರಿಸಿ ನಮಗೆ ನ್ಯಾಯಯುತ ದರ ನೀಡಬೇಕು ಎಂದು ರೈತರು ಒತ್ತಾಯಿಸಿದರು.


