ವಿಜಯಸಾಕ್ಷಿ ಸುದ್ದಿ, ಡಂಬಳ: ಹೋಬಳಿಯ ಸುಕ್ಷೇತ್ರ ಜಂತಲಿ-ಶಿರೂರ ಶ್ರೀ ಚನ್ನವೀರ ಶರಣರ 31ನೇ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವ, ಕಲಬುರ್ಗಿ ಶ್ರೀ ಶರಣಬಸವೇಶ್ವರ ಪುರಾಣ ಮಂಗಲೋತ್ಸವ, ಕುಂಭೋತ್ಸವ, 1008 ದೀಪೋತ್ಸವ, ಸಾಮೂಹಿಕ ವಿವಾಹ ಮಹೋತ್ಸವವು ನ.20, 21ರಂದು ಜರುಗಲಿದೆ.
ನ.20ರಂದು ಮುಂಜಾನೆ 7.30 ಗಂಟೆಗೆ ಷಟಸ್ಥಲ ಧ್ವಜಾರೋಹಣ ಕಾರ್ಯಕ್ರಮ, 8 ಗಂಟೆಗೆ ಹಿರೇವಡ್ಡಟ್ಟಿಯ ಶ್ರೀ ಪೂಜ್ಯ ವೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಅವರಿಂದ ಕುಂಭೋತ್ಸವ ಜರುಗುವದು.
ಸಂಜೆ 5 ಗಂಟೆಗೆ ಶರಣ ಬಳಗದವರಿಂದ ಕೆರಿಕೋಡಿ ಶ್ರೀ ಬಸವೇಶ್ವರ ದೇವಸ್ಥಾನದಿಂದ ರಥದ ಕಳಸ ಆಗಮಿಸುವದು. ಸಂಜೆ 6 ಗಂಟೆ ಲಘು ರಥೋತ್ಸವ ಹಾಗೂ 1008 ದೀಪೋತ್ಸವ ಜರುಗಲಿದೆ. ರಾತ್ರಿ 7.30ಕ್ಕೆ ನಡೆಯುವ ಭಕ್ತಹಿತ ಚಿಂತನಗೋಷ್ಠಿ ಕಾರ್ಯಕ್ರಮದ ಸಾನ್ನಿಧ್ಯವನ್ನು ಜಂತಲಿ-ಶಿರೂರ ಬಳಗಾನೂರನ ಪೂಜ್ಯಶ್ರೀ ಶಿವಶಾಂತವೀರ ಶರಣರು, ಹರ್ಲಾಪೂರ ಅಭಿನವ ಡಾ. ಕೊಟ್ಟೂರೇಶ್ವರ ಮಹಾಸ್ವಾಮಿಗಳು ವಹಿಸುವರು. ಹಿರೇವಡ್ಡಟ್ಟಿ ಹಿರೇಮಠ ವೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಮ್ಮುಖ ವಹಿಸಿಕೊಳ್ಳುವರು.
ನ. 21ರಂದು ಮುಂಜಾನೆ 5 ಗಂಟೆಗೆ ಶ್ರೀ ಚನ್ನವೀರ ಶರಣರ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಮಹಾ ಮಂಗಳಾರತಿಯು ವೇ.ಮೂ. ಶ್ರೀ ಚನ್ನವೀರಯ್ಯ ಶಾಸ್ತ್ರಿ, ಹಾಲಯ್ಯಸ್ವಾಮಿ ಹಿರೇಮಠ, ಮಲ್ಲಯ್ಯಸ್ವಾಮಿ ಹಿರೇಮಠ, ಶ್ರೀ ಶರಣರ ಅಂಧರ ಕಲ್ಯಾಣಾಶ್ರಮ ಹುಬ್ಬಳ್ಳಿ ಹಾಗೂ ಬಳಗದವರಿಂದ ಜರುಗುವುದು.
ಶಿವಲಿಂಗಯ್ಯ ಶಾಸ್ತ್ರಿಗಳು ಹಿರೇಮಠ ಮಂಗಲ ನುಡಿಯುವರು. ಸಂಗೀತ ಸೇವೆಯನ್ನು ಬಾಗೇಶಕುಮಾರ ಗವಾಯಿ ನೀಡಲಿದ್ದು, ತಬಲಾ ಸಾಥ್ ಶಶಿಕುಮಾರ ಗುಲಬರ್ಗಾ ಅವರು ನೆರವೇರಿಸಲಿದ್ದಾರೆ. ದಾನಿಗಳಾದ ಕೊಪ್ಪಳದ ಅನ್ನಪೂರ್ಣಮ್ಮ ಹನಮಂತಪ್ಪ ಹಾಸಗಲ್ಲ ಅವರಿಂದ ಸಂಜೆ 5 ಗಂಟೆಗೆ ಶರಣರ ತುಲಾಭಾರ ನಡೆಯುವುದು. ರಾತ್ರಿ ಕೇರಿಕೋಡಿ ಬಸವೇಶ್ವರ ನಾಟ್ಯ ಸಂಘದಿಂದ `ಮಗ ಹೋದರೂ ಮಾಂಗಲ್ಯ ಬೇಕು’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.
ನ. 22ರಂದು ಸಂಜೆ 5 ಗಂಟೆಗೆ ಕಡಬಿನ ಕಾಳಗ, ಶ್ರೀ ಶರಣರ ಬೆಳ್ಳಿ ಮೂರ್ತಿ ಉತ್ಸವ ಜರುಗಲಿದೆ. ಹಿರೇವಡ್ಡಟ್ಟಿ ವೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸುವರು. ಗವಿಸಿದ್ಧಯ ಹಳ್ಳಿಕೆರಿಮಠ, ಶರಣು ಯಮನೂರ ಅವರಿಂದ ಜನಪದ ಹಾಸ್ಯ ಕಾರ್ಯಕ್ರಮ, ರಾತ್ರಿ 9 ಗಂಟೆಗೆ ಸಿಡಿಮದ್ದು ಪ್ರದರ್ಶನ ಜರುಗಲಿದೆ ಎಂದು ಜಾತ್ರಾ ಸಮಿತಿಯ ಪ್ರಕಟಣೆ ತಿಳಿಸಿದೆ.
ನ. 21ರಂದು ಬೆಳಿಗ್ಗೆ 11.30 ಗಂಟೆಗೆ ಶ್ರೀ ಚನ್ನವೀರ ಶರಣರ 31ನೇ ಪುಣ್ಯಸ್ಮರಣೋತ್ಸವ ಮತ್ತು ಸಾಮೂಹಿಕ ವಿವಾಹ ಕಲ್ಯಾಣೋತ್ಸವ, ಪುರಾಣ ಮಹಾಮಂಗಲ, ಶರಣ ಚಿಂತನ ಗೋಷ್ಠಿ ಹಾಗೂ 343ನೇ ಶಿವಾನುಭವದ ಕಾರ್ಯಕ್ರಮದ ಪಾವನ ಸಾನ್ನಿಧ್ಯವನ್ನು ಹೊಸಹಳ್ಳಿಯ ಪೂಜ್ಯ ಶ್ರೀಬೂದೀಶ್ವರ ಸಂಸ್ಥಾನಮಠದ ಅಭಿನವ ಬೂದೀಶ್ವರ ಮಹಾಸ್ವಾಮಿಗಳು, ಹೂವಿನಶಿಗ್ಲಿ ವಿರಕ್ತಮಠದ ಪೂಜ್ಯ ಚನ್ನವೀರ ಮಹಾಸ್ವಾಮಿಗಳು, ಸುಕ್ಷೇತ್ರ ಜಂತಲಿ-ಶಿರೂರ ಬಳಗಾನೂರ ಪೂಜ್ಯಶ್ರೀ ಶಿವಶಾಂತವೀರ ಶರಣರು, ಕಣಗಿನಹಾಳ-ಜಂತಲಿ-ಶಿರೂರ ಧರ್ಮರಮಠದ ಧರ್ಮರಾಜ ಅಜ್ಜನವರು ವಹಿಸುವರು. ಮುಖ್ಯ ಅತಿಥಿಗಳಾಗಿ ಜಂತಲಿ-ಶಿರೂರ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಪಾಲ್ಗೊಳ್ಳಲಿದ್ದಾರೆ.


