ವಿಜಯಸಾಕ್ಷಿ ಸುದ್ದಿ, ಗದಗ: ನಾಡಿನಲ್ಲಿ ಸಾಧು-ಸಂತರು, ದಾರ್ಶನಿಕರು ತತ್ವ–ಸಂದೇಶಗಳನ್ನು ನೀಡುವ ಮೂಲಕ ಸಮಾಜವನ್ನು ಸನ್ಮಾರ್ಗದಲ್ಲಿ ಮುನ್ನಡೆಸಲು ಕಾರಣರಾಗಿದ್ದಾರೆ. ಧರ್ಮದ ಸನ್ಮಾರ್ಗದಲ್ಲಿ ಮುನ್ನಡೆಯುವ ಮೂಲಕ ನಿಜವಾದ ಧರ್ಮಗುರುಗಳನ್ನು, ಸಾಧು-ಸಂತರ ಹಿತೋಪದೇಶಗಳನ್ನು ಆಲಿಸಿ ಜೀವನ್ಮುಕ್ತಿ ಹೊಂದಬೇಕೆಂದು ಅಖಿಲ ಭಾರತ ಭಾವಸಾರ ಕ್ಷತ್ರಿಯ ವಾರಕರ ಮಂಡಳಿಯ ರಾಜ್ಯ ಅಧ್ಯಕ್ಷ ಬಂಕಾಪೂರದ ಭಾನುದಾಸ ಮಹಾರಾಜರು ಹೇಳಿದರು.
ಅವರು ಗದುಗಿನ ವಿಠ್ಠಲ ಮಂದಿರದಲ್ಲಿ ಗದಗ ಭಾವಸಾರ ಕ್ಷತ್ರಿಯ ಸಮಾಜದಿಂದ ಸಂತ ಜ್ಞಾನೇಶ್ವರ ಮಹಾರಾಜರ ಸಂಜೀವಿನಿ ಸಮಾಧಿ ನಿಮಿತ್ತ ಏರ್ಪಡಿಸಿದ್ದ ಸೋಹಳಾ ಉತ್ಸವದಲ್ಲಿ ಮಾತನಾಡಿದರು.
ವಾರಕರ ಸಂಪ್ರದಾಯದಲ್ಲಿ ಜಾತಿ, ಮತ, ಬೇಧ ಎಂಬುದು ಇಲ್ಲ. ಎಲ್ಲರನ್ನು ಸಮಭಾವದಿಂದ ಕಾಣುವ ಸೌಹಾರ್ದ, ಸಹಿಷ್ಣುತೆಯ ಸಮುದಾಯವಾಗಿದೆ. ಧರ್ಮಪರಂಪರೆಯನ್ನು ಶ್ರದ್ಧಾ–ಭಕ್ತಿಯಿಂದ ಆಚರಿಸಿಕೊಂಡು ಬಂದವರು. ಈ ಪರಂಪರೆ ಸಂಪ್ರದಾಯ ಹೀಗೆಯೇ ಮುಂದುವರೆಯಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಧರ್ಮಮಾರ್ಗದಲ್ಲಿ ಮುನ್ನಡೆಸಲು ಪಾಲಕ-ಪೋಷಕರು ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗದಗ ಭಾವಸಾರ ಕ್ಷತ್ರಿಯ ಸಮಾಜ ಉತ್ಸವ ಸಮಿತಿ, ಮಹಿಳಾ ಸಮಿತಿ, ಯುವಕ ಮಂಡಳಿ ಹಾಗೂ ಸಂತ ಮಂಡಳಿಯವರು ಸೇರಿದಂತೆ ಸಮಾಜ ಬಾಂಧವರು ಪಾಲ್ಗೊಂಡಿದ್ದರು.


