‘ಕಾಂತಾರ ಚಾಪ್ಟರ್ 1’ ಯಶಸ್ಸಿನ ಹಿನ್ನಲೆಯಲ್ಲಿ ನಟ-ನಿರ್ದೇಶಕ ರಿಷಬ್ ಶೆಟ್ಟಿ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಬುಧವಾರ ಭೇಟಿ ಮಾಡಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಡಿಕೆಶಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇಂದು ನನ್ನ ಗೃಹ ಕಚೇರಿಯಲ್ಲಿ ಖ್ಯಾತ ನಟ ರಿಷಬ್ ಶೆಟ್ಟಿಯವರು ಭೇಟಿ ನೀಡಿ ಚರ್ಚೆ ನಡೆಸಿದರು. ‘ಕಾಂತಾರ: ಅಧ್ಯಾಯ 1’ ಚಿತ್ರ ಭರ್ಜರಿ ಯಶಸ್ಸು ಕಂಡಿರುವುದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸಿದೆ. ನಮ್ಮ ನೆಲಹೊರೆಯ ಸಂಸೃತಿ, ಸಂಪ್ರದಾಯ ಹಾಗೂ ಆಚಾರ-ವಿಚಾರಗಳನ್ನು ಜಗತ್ತಿನ ಮುಂದೆ ಪರಿಚಯಿಸಿದ ರಿಷಬ್ ಅವರ ಕಲೆ ಶ್ಲಾಘನೀಯ. ಅವರ ಮುಂದಿನ ಚಿತ್ರರಂಗದ ಪಯಣ ಇನ್ನಷ್ಟು ಎತ್ತರಕ್ಕೆ ಏರಲಿ,” ಎಂದು ಡಿಕೆಶಿ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಡಿಕೆಶಿ ಹಾಗೂ ರಿಷಬ್ ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆದರೆ ಸಭೆಯ ನಿಖರ ಉದ್ದೇಶವನ್ನು ರಿಷಬ್ ಶೆಟ್ಟಿ ಪ್ರಕಟಿಸಿಲ್ಲ. ಈ ನಡುವೆ, ‘ಕಾಂತಾರ: ಚಾಪ್ಟರ್ 1’ ಪ್ರಸ್ತುತ ಯಶಸ್ವಿ ವಿಜಯಯಾತ್ರೆ ಮುಂದುವರೆಸಿದ್ದು, ಈಗಾಗಲೇ 850 ಕೋಟಿಗೂ ಅಧಿಕ ಬಾಕ್ಸ್‌ಆಫೀಸ್ ವಸೂಲಿ ದಾಖಲಿಸಿದೆ. ‘ಕೆಜಿಎಫ್ 2’ ನಂತರ ಅತ್ಯಧಿಕ ಗಳಿಕೆ ಮಾಡಿದ ಕನ್ನಡ ಸಿನಿಮಾ ಎಂಬ ಮಾನ್ಯತೆ ಪಡೆದಿರುವುದಲ್ಲದೆ 2025ರ ಅತ್ಯಂತ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ.


