
ವಿಜಯಸಾಕ್ಷಿ ಸುದ್ದಿ, ಗದಗ: ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಜಿಲ್ಲಾ ಸಹಕಾರ ಯೂನಿಯನ್, ಕೆ.ಸಿ.ಸಿ ಬ್ಯಾಂಕ್ ಧಾರವಾಡ, ಕೆ.ಎಂ.ಎಫ್ ಧಾರವಾಡ, ಹಾಲು ಉತ್ಪಾದಕರ ಸಹಕಾರ ಸಂಘ ಹುಣಸಿಕಟ್ಟಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಜಗಾಪೂರ ಹಾಗೂ ನರಗುಂದ ತಾಲೂಕಿನ ಎಲ್ಲಾ ಸಹಕಾರ ಸಂಘ/ಬ್ಯಾಂಕುಗಳ ಸಂಯುಕ್ತ ಆಶ್ರಯದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ `ಜಾಗತಿಕ ಸ್ಪರ್ಧಾತ್ಮಕತೆಗಾಗಿ ನವನಾವೀನ್ಯತೆಯ ಸಹಕಾರಿ ವ್ಯವಹಾರದ ಮಾದರಿಗಳು’ ಕಾರ್ಯಕ್ರಮವನ್ನು ನರಗುಂದ ತಾಲೂಕಿನ ಹುಣಸಿಕಟ್ಟಿ ಗ್ರಾ.ಪಂನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ ನಿರ್ದೇಶಕ ಎಚ್.ಜಿ. ಹಿರೇಗೌಡ್ರ ಉದ್ಘಾಟಿಸಿ ಮಾತನಾಡಿ, ವೇಗವಾಗಿ ಬದಲಾಗುತ್ತಿರುವ ಜಾಗತಿಕ ಆರ್ಥಿಕತೆಯಲ್ಲಿ, ನಾವೀನ್ಯತೆಯೇ ಸ್ಪರ್ಧಾತ್ಮಕತೆಯ ಮೂಲಾಧಾರವಾಗಿದೆ. ಪ್ರಪಂಚದಾದ್ಯಂತ ಉದ್ಯಮಗಳು, ಹೊಸ ತಂತ್ರಜ್ಞಾನಗಳು ಮತ್ತು ವ್ಯವಹಾರ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಿದ್ದಂತೆ, ಸಹಕಾರಿ ಸಂಸ್ಥೆಗಳು ಸಾಂಪ್ರದಾಯಿಕವಾಗಿ ಸಮುದಾಯ ಕೇಂದ್ರಿತ ಮತ್ತು ಸದಸ್ಯ ಚಾಲಿತ ವಿಧಾನಕ್ಕೆ ಹೆಸರುವಾಸಿಯಾಗಿವೆ. 21ನೇ ಶತಮಾನದ ಸಹಕಾರಿ ಸಂಸ್ಥೆಗಳು ಇನ್ನು ಮುಂದೆ ಸ್ಥಳೀಯ ಮಾರುಕಟ್ಟೆಗೆ ಸೀಮಿತವಾಗಿಲ್ಲ. ಇವುಗಳು ಜಾಗತಿಕವಾಗಿ ಸ್ಪರ್ಧಿಸುತ್ತಿವೆ ಮತ್ತು ಸಹಕರಿಸುತ್ತಿವೆ ಎಂದು ಹೇಳಿದರು.
ಧಾರವಾಡ ಹಾಲು ಒಕ್ಕೂಟದ ನರಗುಂದ ತಾಲೂಕಿನ ವಿಸ್ತರಣಾಧಿಕಾರಿ ದಿಲೀಪ ಐ. ನದಾಫ ಪ್ರಸ್ತಾವಿಕವಾಗಿ ಮಾತನಾಡಿದರು. ಸಹಕಾರ ಅಭಿವೃದ್ಧಿ ಅಧಿಕಾರಿ ಬಸವರಾಜ ನಿಡಗುಂದಿ ನರಗುಂದ ತಾಲೂಕಿನ ಸಮಗ್ರ ಸಹಕಾರ ಸಂಘಗಳ ಮಾಹಿತಿಯನ್ನು ವಿವರಿಸಿದರು.
ಹಾಲು ಉತ್ಪಾದಕರ ಸಹಕಾರ ಸಂಘ ಹುಣಸಿಕಟ್ಟಿಯ ಅಧ್ಯಕ್ಷ ಶಂಕರಗೌಡ ಬ.ಗಡಿಯಪ್ಪಗೌಡ್ರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರಿ ಸಂಘಗಳು ತಮ್ಮ ಸದಸ್ಯರ ಆರ್ಥಿಕ, ಸಾಮಾಜಿಕ, ಮತ್ತು ಸಾಂಸ್ಕೃತಿಕ ಅಗತ್ಯಗಳನ್ನು ಪೂರೈಸಲು ಮೀಸಲಾಗಿರುವ ಪ್ರಜಾಸತ್ತಾತ್ಮಕ ಸಂಸ್ಥೆಗಳು, ಈ ಗುರಿಗಳಿಗೆ ಪ್ರಮುಖ ಕೊಡುಗೆದಾರರಾಗಿ ಸಹಕಾರ ಸಂಘಗಳು ಗುರುತಿಸಲ್ಪಡುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಜಗಾಪೂರ ಅಧ್ಯಕ್ಷ ಬಸವರಾಜ ಗು.ಬೆಣ್ಣಿ, ಉಪಾಧ್ಯಕ್ಷ ಲಕ್ಷ್ಮಣ ರಾ.ಮುದಕಣ್ಣವರ, ಈರಪ್ಪ ನಿಂಗಪ್ಪ ಲೋಕುರ, ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಈಶ್ವರಪ್ಪ ಮನಿಕಟ್ಟಿ, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಹಿರಿಯ ಲೆಕ್ಕ ಪರಿಶೋಧಕ ಎ.ಎಂ. ಖಟವಟೆ, ಕೆ.ಸಿ.ಸಿ. ಬ್ಯಾಂಕ್ ನರಗುಂದ ನಿರೀಕ್ಷಕ ಮಹಾಂತೇಶ ಎಸ್.ತಳಗಿನಮನಿ, ಪಿ.ಎಂ. ಗೆನ್ನೂರ, ಧಾರವಾಡ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕರು ಹಾಗೂ ಜಿಲ್ಲಾ ಮುಖ್ಯಸ್ಥರಾದ ಡಾ. ಪ್ರಸನ್ ಎಸ್.ಪಟ್ಟೇದ, ನೀರು ಬಳಕೆದಾರರ ಸಹಕಾರ ಸಂಘದ ಕಾರ್ಯದರ್ಶಿ ಸೆಟ್ಟೆಪ್ಪ ಮುಳ್ಳೂರು ಉಪಸ್ಥಿತರಿದ್ದರು.
ಡಾ. ಎಂ.ಬಿ. ಮಡಿವಾಳರ ಉಪನ್ಯಾಸ ನೀಡಿದರು. ಹುಣಸಿಕಟ್ಟಿ ಗ್ರಾ.ಪಂ ಕಾರ್ಯದರ್ಶಿ ಕೆ.ಎನ್. ಹದಗಲ್ ಪ್ರಾರ್ಥಿಸಿದರು. ಹಾಲು ಉತ್ಪಾದಕರ ಸಹಕಾರ ಸಂಘ ಹುಣಸಿಕಟ್ಟಿಯ ಮುಖ್ಯ ಕಾರ್ಯನಿರ್ವಾಹಕ ಎಸ್.ಎಸ್. ಹುಚ್ಚನಗೌಡ್ರ ಸ್ವಾಗತಿಸಿದರು. ಯೂನಿಯನ್ನಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಸ್.ಕರಿಯಪ್ಪನವರ ನಿರೂಪಿಸಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಜಗಾಪೂರದ ಮುಖ್ಯ ಕಾರ್ಯನಿರ್ವಾಹಕ ಲಿಂಗರಡ್ಡಿ ಶಿ.ಹಳೇಮನಿ ವಂದಿಸಿದರು.
ಕೆ.ಸಿ.ಸಿ. ಬ್ಯಾಂಕ್ ನಿರ್ದೇಶಕ ಎಂ.ಎಸ್. ಪಾಟೀಲ ಸಹಕಾರಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡುತ್ತಾ, ಆರ್ಥಿಕ ಕಾರ್ಯಸಾಧ್ಯತೆಯನ್ನು ಸಾಮಾಜಿಕ ಜವಾಬ್ದಾರಿಯೊಂದಿಗೆ ಸಂಯೋಜಿಸುವ ವಿಶಿಷ್ಟ ವ್ಯಾಪಾರ ಘಟಕಗಳಾಗಿ ಸಹಕಾರಿಗಳನ್ನು ಬಹಳ ಹಿಂದಿನಿಂದಲೂ ಗುರುತಿಸಲಾಗಿದೆ. ಆದಾಗ್ಯೂ ಜಾಗತಿಕ ಸ್ಪರ್ಧಾತ್ಮಕತೆಯು ಸಾಮಾಜಿಕ ಬದ್ಧತೆಗಿಂತ ಹೆಚ್ಚಿನದನ್ನು ಬಯಸುತ್ತದೆ. ಇದಕ್ಕೆ ಹೊಂದಿಕೊಳ್ಳುವಿಕೆ, ತಂತ್ರಜ್ಞಾನ ಅಳವಡಿಕೆ, ಮಾರುಕಟ್ಟೆ ಸ್ಪಂದಿಸುವಿಕೆ ಮತ್ತು ನಾವೀನ್ಯತೆಯ ಅಗತ್ಯವಿದೆ ಎಂದರು.

