ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರದಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಉಪವಾಸ ಸತ್ಯಾಗ್ರಹ ನಿರತರಾಗಿದ್ದ ತಾಲೂಕಿನ ಆದ್ರಳ್ಳಿ ಗವಿಮಠದ ಶ್ರೀ ಕುಮಾರ ಮಹಾರಾಜರು ತೀವ್ರ ಅಸ್ವಸ್ಥಗೊಂಡು ಗದಗ ಜಿಲ್ಲಾಸ್ಪತ್ರೆಗೆ ದಾಖಲಾದ ಘಟನೆ ಜರುಗಿದೆ.
ಗೋವಿನಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರಗಳು ಪ್ರಾರಂಭವಾಗಬೇಕೆಂಬ ಬೇಡಿಕೆಯೊಂದಿಗೆ ಲಕ್ಷ್ಮೇಶ್ವರಲ್ಲಿ ರೈತ ಸಂಘಟನೆಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದಲ್ಲಿ ಕಳೆದ 4 ದಿನಗಳಿಂದ ಹನಿ ನೀರು, ಅನ್ನ, ಔಷಧವನ್ನೂ ಸೇವಿಸದೇ ಸಲ್ಲೇಖನ ವ್ರತದೊಂದಿಗೆ ರೈತರ ಹೋರಾಟಕ್ಕೆ ಶ್ರೀಗಳು ಬಲ ತುಂಬಿದ್ದರು.
ಶ್ರೀಗಳ ಕಠಿಣ ಹೋರಾಟಕ್ಕೆ ಎಚ್ಚೆತ್ತ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ. ಪಾಟೀಲ, ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿ, ಮಾಜಿ ಶಾಸಕರು ಸೇರಿ ಅನೇಕ ಮುಖಂಡರು ಕಠಿಣ ಉಪವಾಸ ವ್ರತ ಕೈಬಿಡುವಂತೆ ಮಾಡಿಕೊಂಡ ಮನವಿಯನ್ನು ತಿರಸ್ಕರಿಸಿದ್ದ ಶ್ರೀಗಳು ಹೋರಾಟದ ದಿಕ್ಕನ್ನೇ ಬದಲಿಸಿದ್ದರು.
ದಿನೇ ದಿನೇ ಆರೋಗ್ಯದಲ್ಲಿ ಏರುಪೇರಾಗಿ ಸಕ್ಕರೆ ಪ್ರಮಾಣ, ರಕ್ತದೊತ್ತಡ ಕಡಿಮೆಯಾಗುತ್ತಿತ್ತು. ಅಲ್ಲದೆ ಬೆನ್ನು, ಕಾಲು ನೋವುಗಳು ಬಾಧಿಸುತ್ತಿದ್ದರೂ ರೈತರ ಸಲುವಾಗಿ ಪ್ರಾಣ ನೀಡುತ್ತೇನೆ ಹೊರತು ನ್ಯಾಯ ಸಿಗುವವರೆಗೂ ಜಾಗೆ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಆರೋಗ್ಯ ಇಲಾಖೆ ವತಿಯಿಂದ ಕಳೆದ 2-3 ದಿನಗಳಿಂದ ಗಂಟೆಗೊಂದು ಬಾರಿ ಸಕ್ಕರೆ ಪ್ರಮಾಣ, ರಕ್ತದೊತ್ತಡ ಪರೀಕ್ಷೆ ಮಾಡಲು ಸಮುದಾಯ ಆರೋಗ್ಯ ಕೇಂದ್ರದಿಂದ ಸಿಬ್ಬಂದಿಗಳನ್ನು ನೇಮಿಸಲಾಗಿತ್ತು. ಗುರುವಾರ ಲಕ್ಷ್ಮೇಶ್ವರ ಬಂದ್ ಕರೆ ಹಿನ್ನೆಲೆಯಲ್ಲಿ ಆರೋಗ್ಯದೊಂದಿಗೆ ಒತ್ತಡದ ಕಾರಣದಿಂದ ಕುಗ್ಗಿಸಿದ್ದರು. ಪ್ರತಿಭಟನಾ ಮೆರವಣಿಗೆ ವೇದಿಕೆ ಏರುತ್ತಿದ್ದಂತೆ ಏಕಾಏಕಿ ಅಸ್ವಸ್ಥಗೊಂಡರು. ಕೂಡಲೇ ತಾಲೂಕು ಆಸ್ಪತ್ರೆಗೆ ವೈದ್ಯಾಧಿಕಾರಿಗಳಿಂದ ಶ್ರೀಗಳ ತಪಾಸಣೆ ಮಾಡಲಾಗಿ, ಬಿಪಿ, ಶುಗರ್ ಮಟ್ಟ ಕಡಿಮೆಯಾಗಿ, ಪಲ್ಸ್ ರೇಟ್ ಜಾಸ್ತಿಯಾಗಿ ಅರ್ಧ ಪ್ರಜ್ಞಾವಸ್ಥೆಗೆ ತಲುಪಿದ್ದರಿಂದ ಕೂಡಲೇ ಹೆಚ್ಚಿನ ചികിത്സೆಗೆ ಗದಗ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಯಿತು.
ಶ್ರೀಗಳು ರೈತರ ಪರವಾಗಿ ಹೋರಾಟದಲ್ಲಿ ಪಾಲ್ಗೊಂಡು ನಿತ್ರಾಣಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಯಾವುದೇ ತೊಂದರೆ ಇಲ್ಲ. ಭಕ್ತರು ಆತಂಕಕ್ಕೆ ಒಳಗಾಗುವದು ಬೇಡ ಶ್ರೀಗಳಿಗೆ ಹೆಚ್ಚಿನ ಚಿಕಿತ್ಸೆ ಮತ್ತು ವಿಶ್ರಾಂತಿಯ ಅನಿವಾರ್ಯತೆಯಿದೆ. ಅವರು ಕೂಡಲೇ ಆರೋಗ್ಯ ಸುಧಾರಿಸಿ ಹೋರಾಟಕ್ಕೆ ಹೆಚ್ಚಿನ ಶಕ್ತಿ ತುಂಬಲಿ ಎಂದು ಪ್ರಾರ್ಥಿಸುವದಾಗಿ ಮಂಜುನಾಥ ಮಾಗಡಿ ತಿಳಿಸಿದರು.
ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ ಅವರು ಶ್ರೀಗಳ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ವಹಿಸಬೇಕೆಂದು ಜಿಲ್ಲಾಸ್ಪತ್ರೆಯ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಅವರಿಗೆ ಸೂಚಿಸಿದರು.


