ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸರ್ಕಾರ ಬೆಂಬಲ ಬೆಲೆಯೋಜನೆಯಡಿ ಗೋವಿನಜೋಳ ಖರೀದಿಸಬೇಕು ಎಂಬ ದಿಟ್ಟ ನಿಲುವಿನೊಂದಿಗೆ ಸಮಗ್ರ ರೈತ ಸಂಘಟನೆಗಳ ಒಕ್ಕೂಟ ಮತ್ತು ಎಲ್ಲ ಸಂಘಟನೆಗಳ ಸಹಯೋಗದಲ್ಲಿ ಗುರುವಾರ ನೀಡಿದ್ದ ಲಕ್ಷ್ಮೇಶ್ವರ ಬಂದ್ ಕರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.
ನ.15ರಿಂದ ರೈತರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ದಿನೇ ದಿನೇ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹೋರಾಟಕ್ಕೆ ಸರ್ಕಾರದಿಂದ ಸ್ಪಷ್ಟ, ಸಮಾಧಾನಕರ ಉತ್ತರ ಸಿಗದಿರುವ ಕಾರಣ, ಸರ್ಕಾರವನ್ನು ಎಚ್ಚರಿಸುವ ನಿಟ್ಟಿನಲ್ಲಿ ನೀಡಿದ್ದ ಬಂದ್ ಕರೆ ಸಂಪೂರ್ಣ ಯಶಸ್ವಿಯಾಯಿತು.
ಬಂದ್ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಜಿಲ್ಲಾಡಳಿತ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿತ್ತು. ರೈತ ಸಂಘಟನೆಗಳ ಒಕ್ಕೂಟ ಕರೆನೀಡಿದ್ದ ಬಂದ್‌ಗೆ ಅನೇಕ ಮಠಾಧೀಶರು, ಕನ್ನಡಪರ ಸಂಘಟನೆಗಳು, ಬಜಾರ ವ್ಯಾಪಾರಸ್ಥರ ಸಂಘ, ಬೀದಿ ಬದಿ ವ್ಯಾಪಾರಸ್ಥರ ಸಂಘ, ವಿದ್ಯಾರ್ಥಿ ಸಂಘಟನೆಗಳು, ಶ್ರೀರಾಮ ಸೇನೆ, ವಕೀಲರ ಸಂಘ, ಮೆಕಾನಿಕ್ ಸಂಘ, ಮಾಜಿ ಸೈನಿಕರ ಸಂಘ, ಔಷಧ ವ್ಯಾಪಾರಸ್ಥರ ಸಂಘ, ವೈದ್ಯರ ಸಂಘ, ಅಂಜುಮನ್ ಕಮಿಟಿ ಮುಂತಾದ ಸಂಘಟನೆಗಳು ಸ್ವಯಂ ಪ್ರೇರಿತ ಬೆಂಬಲ ವ್ಯಕ್ತಪಡಿಸಿ ಪಾಲ್ಗೊಂಡಿದ್ದ ರಾಗಿ ಬಂದ್ ಸಂಪೂರ್ಣ ಯಶಸ್ವಿಯಾಯಿತು.
ಬೆಳಿಗ್ಗೆಯಿಂದಲೇ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಅಮವಾಸ್ಯೆ ಇದ್ದರೂ ಬಹುತೇಕ ಎಲ್ಲ ಅಂಗಡಿ ಮುಂಗಟ್ಟುಗಳು, ಹೋಟೆಲ್, ಬೀದಿ ಬದಿ ವ್ಯಾಪಾರಸ್ಥರು, ಎಪಿಎಂಸಿ, ಬಜಾರ ವ್ಯಾಪಾರಸ್ಥರು ಬೆಂಬಲ ಸೂಚಿಸಿದ್ದರಿಂದ ಎಲ್ಲ ವ್ಯಾಪಾರ ವಹಿವಾಟು ಸ್ಥಗಿತಗೊಂಡು ಇಡೀ ದಿನ ಬಜಾರ್ ಬಿಕೋ ಎನ್ನುವಂತಿತ್ತು. ತಹಸೀಲ್ದಾರ ರಾಘವೇಂದ್ರ ರಾವ್, ಡಿವೈಎಸ್ಪಿ ಮುರ್ತುಜಾ ಖಾದ್ರಿ ನೇತೃತ್ವದಲ್ಲಿ ಪಟ್ಟಣದಾದ್ಯಂತ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಹೋರಾಟದ ನೇತೃತ್ವ ವಹಿಸಿದ್ದ ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ, ರವಿಕಾಂತ ಅಂಗಡಿ, ಮಹೇಶ ಹೊಗೆಸೊಪ್ಪಿನ, ಶರಣು ಗೋಡಿ, ಪೂರ್ಣಾಜಿ ಖರಾಟೆ, ಬಸಣ್ಣ ಬೆಂಡಿಗೇರಿ ಸೇರಿ ಸಾವಿರಾರು ಜನರು ಹೋರಾಟದಲ್ಲಿ ಪಾಲ್ಗೊಂಡಿದ್ದರು.
ಬೃಹತ್ ಪ್ರತಿಭಟನಾ ಮೆರವಣಿಗೆ
ಪಟ್ಟಣದ ಪೇಟೆ ಆಂಜನೇಯ ದೇವಸ್ಥಾನದಿಂದ ರೈತರ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ರೈತರು ಹಲಗೆ, ಭಜನೆ, ಎತ್ತು, ಚಕ್ಕಡಿ ಸಮೇತರಾಗಿ ಸರಕಾರ ನಿರ್ಲಕ್ಷ್ಯ ಧೋರಣೆಯ ವಿರುದ್ಧ ಘೋಷಣೆ ಕೂಗುತ್ತಾ ಶಿಗ್ಲಿ ನಾಕಾ ಬಳಿ ಸಂಗೊಳ್ಳಿ ರಾಯಣ್ಣ ವೃತ್ತದವರೆಗೂ ಸಾಗಿದರು. ಈ ವೇಳೆ ಪ್ರತಿಭಟನಾಕಾರರು ಸರಕಾರವು ತನ್ನ ಸ್ಪಷ್ಟ ನಿರ್ಧಾರ ಘೋಷಣೆ ಮಾಡದಿರುವದಕ್ಕೆ ಅರೆಬೆತ್ತಲೆಯಾಗಿ ಮೆರವಣಿಗೆ ನಡೆಸಿ ಅಕ್ರೋಶ ವ್ಯಕ್ತಪಡಿಸಿದರು. ಹೂವಿನಶಿಗ್ಲಿ, ಕುಂದಗೋಳ, ಅತ್ತಿಮತ್ತೂರ, ಜಮಖಂಡಿ, ಮಳೆಮಲ್ಲಿಕಾರ್ಜುನ ಶ್ರೀಗಳು ಹೋರಾಟದಲ್ಲಿ ಪಾಲ್ಗೊಂಡಿದ್ದರು.


