ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮೆಕ್ಕೆಜೋಳದ ಬೆಲೆ ಸಂಪೂರ್ಣ ಕುಸಿದಿದ್ದು, ನಮ್ಮ ಭಾಗದ ರೈತರು ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಸಬೇಕು ಎಂದು ದೊಡ್ಡಮಟ್ಟದ ಹೋರಾಟ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ರೈತರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಗುರುವಾರ ಬೆಂಗಳೂರಿನಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಅವರನ್ನು ಭೇಟಿ ಮಾಡಿ ವಸ್ತುಸ್ಥಿತಿ ವಿವರಿಸಿದರು.
ಕೇಂದ್ರ ಸರ್ಕಾರ ಈಗಾಗಲೇ ಎಂಎಸ್‌ಪಿ 2400 ರೂ. ಘೋಷಣೆ ಮಾಡಿದೆ. ಆದರೆ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ 1600 ರೂ ಬೆಲೆಯಿದೆ. ಈ ಬೆಲೆಗೆ ಮಾರಾಟ ಮಾಡಿದರೆ ರೈತರು ನಷ್ಟಕ್ಕೊಳಗಾಗುತ್ತಾರೆ. ಮೊದಲೇ ಮುಂಗಾರು ಕೈಕೊಟ್ಟಿಲ್ಲ. ಬೆಳೆವಿಮೆ, ಬೆಳೆಹಾನಿ ಪರಿಹಾರವೂ ಬಂದಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಬೆಂಬಲ ಬೆಲೆಗೆ ಇನ್ನೂ ಪ್ರತಿ ಕ್ವಿಂಟಲ್‌ಗೆ 500 ರೂ ಸೇರಿಸಿ 3000 ರೂ.ನಂತೆ ಖರೀದಿಸಬೇಕು. ಇದನ್ನು ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಆಗ್ರಹಿಸುತ್ತಿದ್ದಾರೆ. ಕೂಡಲೇ ಸರ್ಕಾರ ರೈತಪರ ನಿರ್ಧಾರ ಕೈಗೊಂಡು ಆದೇಶಿಸಬೇಕು ಎಂದು ಮನವಿ ಮಾಡಿದರು. ಈ ವೇಳೆ ರೈತ ಮುಖಂಡರು ಇದ್ದರು


