ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕನ್ನಡ ನಾಡಿನಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಕಡಿಮೆಯಾಗುತ್ತಿವೆ. ಇದನ್ನು ಕನ್ನಡ ಪ್ರಾಧಿಕಾರ ದೃಢತೆಯಿಂದ ತಡೆದು ಕನ್ನಡ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ನಿವೃತ್ತ ಪ್ರಾಚಾರ್ಯ ಚಂದ್ರಶೇಖರ ವಸ್ತ್ರದ ಹೇಳಿದರು.
ಪಟ್ಟಣದ ಶ್ರೀ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಡೆದ `ಆಧುನಿಕ ಕರ್ನಾಟಕ ನಿರ್ಮಾಣ; ಗದಗ ಜಿಲ್ಲೆಯ ಕೊಡುಗೆ’ ಒಂದು ದಿನದ ಕಮ್ಮಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಲಿಕೆ ಎಂದಿಗೂ ಹಾಸ್ಯಾಸ್ಪದ ಕಲಿಕೆಯಾಗಬಾರದು. ಅದು ನಮ್ಮ ಜೀವನಕ್ಕೆ ಬೆಳಕು ನೀಡುವಂತಿರಬೇಕು. ಓದದಿದ್ದರೂ, ಬರೆಯದಿದ್ದರೂ ರೈತ ನಮಗೆಲ್ಲ ಅನ್ನ ನೀಡುತ್ತಾನೆ. ಅವನ ಭಾಷೆ ಬದುಕಿನ ಭಾಷೆ. ಇಂತಹ ಭಾಷೆಯು ನಮ್ಮ ಮಕ್ಕಳ ಭಾಷೆಯಾಗಬೇಕು. ಅಂದರೆ ಭಾಷೆಯನ್ನು ಮಕ್ಕಳ ಮನದಲ್ಲಿ ಅಚ್ಚೊತ್ತುವಂತೆ ಸರಿಯಾಗಿ ಕಲಿಸಬೇಕೆಂದು ವಸ್ತ್ರದ ಅಭಿಪ್ರಾಯಪಟ್ಟರು.
ನಾವೆಂದಿಗೂ ನವೆಂಬರ್ ಒಂದರ ಕನ್ನಡಿಗರಾಗಬಾರದು. ಅದೊಂದು ದಿನ ಕನ್ನಡದ ಬಗ್ಗೆ ಮಾತನಾಡಿ ಮತ್ತೆ ಅದನ್ನು ಮರೆತು ಇರುವುದನ್ನೆಂದಿಗೂ ಸಹಿಸಲು ಸಾಧ್ಯವಿಲ್ಲ. ಕನ್ನಡ ಶಬ್ದಗಳನ್ನು ಸರಿಯಾಗಿ ಅರ್ಥೈಸಿಕೊಳ್ಳುವ ಕೆಲಸವಾಗಬೇಕಿದೆ. ಆಯೋಗಗಳು ಮಂಡನೆ ಮಾಡಿರುವ ವರದಿಗಳನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿ, ಅವುಗಳ ಅನುಷ್ಠಾನಕ್ಕೆ ಮುಂದಾಗಬೇಕು. ಅಂದಾಗ ಕನ್ನಡಕ್ಕೊಂದು ಮಹತ್ವದ ಸ್ಥಾನ ದೊರಕುತ್ತದೆ. ಕನ್ನಡವು ನಮ್ಮ ನಿತ್ಯದ ಉಸಿರಿನಲ್ಲಿ ಬೆರೆತಾಗ ಮಾತ್ರ ಕನ್ನಡ ಉಳಿದು, ಬೆಳೆದು ಬರಲು ಸಾಧ್ಯವಾಗುತ್ತದೆ ಎಂದು ವಸ್ತ್ರದ ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯೆ ದಾಕ್ಷಾಯಣಿ ಹುಡೇದ ಆಶಯ ನುಡಿಗಳನ್ನಾಡಿ, ಈ ಕಾರ್ಯಕ್ರಮವನ್ನು ಇಲ್ಲಿ ಹಮ್ಮಿಕೊಂಡ ಔಚಿತ್ಯತೆಯ ಬಗ್ಗೆ ತಿಳಿಸಿದರು. ವೇದಿಕೆಯ ಮೇಲೆ ನಿವೃತ್ತ ಪ್ರಾಚಾರ್ಯ ಹೊಳಿಯಪ್ಪ ಯಲಬುರ್ಗಿ, ಪ್ರಾಚಾರ್ಯ ಎಸ್.ಜಿ. ಕೇಶಣ್ಣವರ ಉಪಸ್ಥಿತರಿದ್ದರು. ಡಾ. ಕಲ್ಲಯ್ಯ ಹಿರೇಮಠ ಸ್ವಾಗತಿಸಿದರು. ಪ್ರಾಧ್ಯಾಪಕ ಪುಂಡಲೀಕ ಮಾದರ ನಿರೂಪಿಸಿದರು. ಐಕ್ಯೂಎಸಿ ಸಂಯೋಜಕ ಡಾ. ಡಿ.ಎಲ್. ಪವಾರ ವಂದಿಸಿದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಚಾರ್ಯ ಬಿ.ಎಫ್. ಚೇಗರೆಡ್ಡಿ ಮಾತನಾಡಿ, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನವೇನೋ ಸಿಕ್ಕಿದೆ. ಆದರೆ ಅದಕ್ಕೆ ಉಳಿದ ಭಾಷೆಗಳಿಗೆ ಸಿಕ್ಕಷ್ಟು ಅನುದಾನವಾಗಲಿ, ಸೌಕರ್ಯವಾಗಲಿ ಸಿಕ್ಕಿಲ್ಲ. ಇದು ವಿಷಾದನೀಯ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈ ಕಡೆಗೆ ಹೆಚ್ಚಿನ ಗಮನ ನೀಡಿ ಕನ್ನಡಕ್ಕೆ ಸಿಗಬೇಕಾದ ಎಲ್ಲ ಸೌಲಭ್ಯಗಳೂ ಸಿಗುವಂತೆ ನೋಡಿಕೊಳ್ಳಲಿ ಎಂದರು.


