ವಿಜಯಸಾಕ್ಷಿ ಸುದ್ದಿ, ಗದಗ: ಹಿಂದೂ ಧರ್ಮದಲ್ಲಿ ಬರುವ ಮಾಸಗಳಲ್ಲಿ ಅತ್ಯಂತ ಶ್ರೇಷ್ಠವಾದ ಮಾಸವೆಂದರೆ ಕಾರ್ತಿಕ ಮಾಸ. ಈ ಮಾಸದಲ್ಲಿ ಉಪವಾಸ ವ್ರತ ಸೇರಿ ಕೆಲವೊಂದು ಆಚರಣೆಗಳನ್ನು ಪಾಲಿಸಿದರೆ ಸಕಲ ಪಾಪಗಳು ಕಳೆದು, ಪುಣ್ಯಪ್ರಾಪ್ತಿಯಾಗುವ ಜೊತೆಗೆ ಧರ್ಮದ ಹಾದಿಯಿಂದ ಕಾನೂನು ಪರಿಪಾಲಕರಾಗಿ ಬದುಕಲು ಸಾಧ್ಯವಾಗುವದೆಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಅಭಿಪ್ರಾಯಪಟ್ಟರು.
ಅವರು ಶ್ರೀ ಕೈಲಾಸ ವರಸಿದ್ಧಿ ಗಣಪತಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ತಿಕ ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾರ್ತಿಕ ಮಾಸದಲ್ಲಿ ದಿನದ ಅವಧಿ ಕಡಿಮೆ, ರಾತ್ರಿಯೇ ದೀರ್ಘವಾಗಿರುವ ಕಾರಣದಿಂದ ಅಂಧಕಾರದ ಪ್ರಭಾವ ಜಾಸ್ತಿ. ಋತುಮಾನದ ಅಂಧಕಾರದ ಜೊತೆಗೆ ಮನಸ್ಸಿನ ಅಂಧಕಾರವನ್ನೂ ಕಳೆಯುವುದು ಈ ಮಾಸದ ವಿಶೇಷ. ಹಾಗಾಗಿಯೇ ಇದನ್ನು ದೀಪೋತ್ಸವದ ತಿಂಗಳೆಂದು ಕರೆಯುತ್ತಾರೆ. ಈ ಮಾಸ ಆಧ್ಯಾತ್ಮ ಸಾಧಕರ ಮಾಸ. ಕಾರ್ತಿಕ ಮಾಸದಲ್ಲಿ ನಿಯಮ-ನಿಷ್ಠೆಯಿಂದ ಉಪವಾಸವಿದ್ದು ದೇವಸ್ಥಾನಕ್ಕೆ ಹೋಗಿ ದೀಪ ಹಚ್ಚಿದರೆ ಪುಣ್ಯಪ್ರಾಪ್ತಿ ಆಗುತ್ತದೆ ಎಂದು ಹೇಳಲಾಗುತ್ತದೆ ಎಂದರು.
ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಬಿ.ಪ್ರಸನ್ನಕುಮಾರ ಮಾತನಾಡಿ, ಭಕ್ತರ ಕಲ್ಯಾಣದ ಜೊತೆಗೆ ಲೋಕ ಕಲ್ಯಾಣಕ್ಕಾಗಿ ಕಾರ್ತಿಕ ದೀಪೋತ್ಸವ ಆಚರಿಸಲಾಗುವದಲ್ಲದೆ ರಂಗ ಪೂಜೆ ಸೇರಿದಂತೆ ವಿಶೇಷ ಪೂಜೆಗಳನ್ನು ದೇವಸ್ಥಾನದಲ್ಲಿ ಪ್ರತಿ ವರ್ಷ ನಡೆಸಲಾಗುವದೆಂದರು.
ಈ ಸಂದರ್ಭದಲ್ಲಿ ಶ್ರೀಮತಿ ಸಿ.ಎಸ್. ಶಿವನಗೌಡ್ರ, ಗಣ್ಯವರ್ತಕರಾದ ಈಶ್ವರಸಾ ಮೇಹರವಾಡೆ, ನ್ಯಾಯವಾದಿ ಟಿ.ಎನ್. ಭಾಂಡಗೆ ದಂಪತಿಗಳು, ನ್ಯಾಯವಾದಿಗಳಾದ ಪ್ರಭಾಕುಮಾರಿ ಬಿ.ಎಂ., ಮಧು ಪೂಜಾರಿ ಉಪಸ್ಥಿತರಿದ್ದರು.
ಪತ್ರಕರ್ತ ಹಾಗೂ ನ್ಯಾಯವಾದಿ ಅನಂತ ಎಸ್. ಕಾರ್ಕಳ ಪ್ರಸ್ತಾವಿಕ ಮಾತನಾಡಿದರು. ದೇವಸ್ಥಾನ ವ್ಯವಸ್ಥಾಪಕ ರಾಮಚಂದ್ರ ಹೆಗಡೆ ವಂದಿಸಿದರು.


