ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬೆಂಬಲ ಬೆಲೆಗೆ ಗೋವಿನಜೋಳ ಖರೀದಿಸಬೇಕು ಎಂದು ಲಕ್ಷ್ಮೇಶ್ವರದಲ್ಲಿ ಸಮಗ್ರ ರೈತ ಹೋರಾಟ ಸಂಘಟನೆಗಳ ಒಕ್ಕೂಟ ಮತ್ತು ಮಠಾಧೀಶರ ನೇತೃತ್ವದಲ್ಲಿ ಕಳೆದ ಒಂದು ವಾರದಿಂದ ನಡೆಸುತ್ತಿದ್ದ ಕಠಿಣ ಉಪವಾಸ ಸತ್ಯಾಗ್ರಹದ ಹೋರಾಟಕ್ಕೆ ಸ್ಪಂದಿಸಿದ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ ಹಿನ್ನೆಲೆಯಲ್ಲಿ ರೈತರು ಧರಣಿ ಸ್ಥಳದಲ್ಲಿ ಸಂಭ್ರಮ ಆಚರಿಸಿದರು.
ಶುಕ್ರವಾರ ಸಿಎಂ ನೇತೃತ್ವದ ತುರ್ತು ಸಭೆ ಕರೆದು ಮೊದಲ ಹಂತದಲ್ಲಿ ರಾಜ್ಯದಲ್ಲಿ 10 ಲಕ್ಷ ಮೆಟ್ರಿಕ್ ಟನ್ ಗೋವಿನಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಾಗುವುದು ಎಂಬ ನಿರ್ಧಾರ ಪ್ರಕಟಿಸಿತು. ಈ ನಿರ್ಧಾರದಿಂದ ರೈತರು ನೆಮ್ಮದಿ ನಿಟ್ಟುಸಿರುಬಿಟ್ಟರು.
ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಮಾರ ಮಹಾರಾಜ ಶ್ರೀಗಳು ಧರಣಿ ಸ್ಥಳಕ್ಕೆ ಬಂದು ಉಪವಾಸ ಸತ್ಯಾಗ್ರಹ ನಿಲ್ಲಿಸಿದರು. ಈ ಸಂದರ್ಭದಲ್ಲಿ ಸ್ವಾಮೀಜಿ ಅವರ ಪೂರ್ವಾಶ್ರಮದ ತಂದೆ ನಾಗಪ್ಪ, ತಾಯಿ ಶಂಕ್ರವ್ವ ದುಃಖ ಭರಿತರಾಗಿ ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ಭೇಟಿ ಮಾಡಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರು, ಲಕ್ಷ್ಮೇಶ್ವರದಲ್ಲಿ ನಡೆದ ಶ್ರೀಗಳ ನೇತೃತ್ವದ ಹೋರಾಟ ಸರ್ಕಾರದ ಗಮನ ಸೆಳೆದಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಸರ್ಕಾರದೊಂದಿಗೆ ನಿರಂತರ ಪತ್ರ ವ್ಯವಹಾರ ಸಂಪರ್ಕದಲ್ಲಿದ್ದರು. ಶುಕ್ರವಾರ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಚಿವರು ರೈತರ ಪರಿಸ್ಥಿತಿ ಮನವರಿಕೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ 10 ಲಕ್ಷ ಮೆಟ್ರಿಕ್ ಟನ್ ಗೋವಿನವನ್ನು ಬೆಂಬಲ ಬೆಲೆಯಡಿ ಖರೀದಿಸಲು ಸರ್ಕಾರ ತೀರ್ಮಾನಿಸಿದೆ. ಲಕ್ಷ್ಮೇಶ್ವರದಲ್ಲಿ ಮೊದಲು ಖರೀದಿ ಕೇಂದ್ರ ಕಾರ್ಯಾರಂಭಕ್ಕೆ ಕ್ರಮ ಕೈಗೊಳ್ಳುತ್ತೇವೆ. ದಯವಿಟ್ಟು ಶ್ರೀಗಳು ಉಪವಾಸ ಬಿಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶ್ರೀಗಳು ಎಳೆನೀರು ಸೇವಿಸಿ ಸಮ್ಮತಿಸಿದರು. ಈ ವೇಳೆ ಅಪರ ಜಿಲ್ಲಾಧಿಕಾರಿ ದುರಗೆಶ್ ಕೆ.ಆರ್ ಮತ್ತು ಉಪವಿಭಾಗಾಧಿಕಾರಿ ಗಂಗಪ್ಪ ಎಂ ಇದ್ದರು.
ಖರೀದಿ ಕೇಂದ್ರ ತೆರೆಯುವ ಕುರಿತು ಸರ್ಕಾರದ ಅಧಿಕೃತ ಆದೇಶ ಪ್ರತಿ ಬರುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಮತ್ತು ಮೊದಲು ಖರೀದಿ ಕೇಂದ್ರ ಹೋರಾಟದ ವೇದಿಕೆಯಲ್ಲಿಯೇ ಉದ್ಘಾಟನೆಯಾಗಬೇಕು. ಅಲ್ಲಿಯವರೆಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಂದುವರೆಸುತ್ತೇವೆ ಎಂಬ ಒಮ್ಮತದ ನಿಲುವನ್ನು ಪ್ರತಿಭಟನಾಕಾರರು ವ್ಯಕ್ತಪಡಿಸಿದರು.
ಈ ವೇಳೆ ಹೋರಾಟದ ನೇತೃತ್ವ ವಹಿಸಿರುವ ಮಂಜುನಾಥ ಮಾಗಡಿ, ರವಿಕಾಂತ ಅಂಗಡಿ, ನಾಗರಾಜ ಚಿಂಚಲಿ, ಶರಣು ಗೋಡಿ, ಉಪವಾಸ ನಿರತ ಬಸಣ್ಣ ಬೆಂಡಿಗೇರಿ, ಪೂರ್ಣಾಜಿ ಖರಾಟೆ, ವಕೀಲರಾದ ಎಂ.ಎಸ್. ದೊಡ್ಡಗೌಡ್ರ ಮಾತನಾಡಿ, ಈ ಹೋರಾಟದ ಜಯ ಮಠಾಧೀಶರು ಮತ್ತು ರೈತರಿಗೆ, ಜಿಲ್ಲಾಧಿಕಾರಿಗಳಿಗೆ ಸಲ್ಲುತ್ತದೆ. ಅನ್ನದಾತ ಒಗ್ಗಟ್ಟಾಗಿ ಹೋರಾಟ ಮಾಡಿದರೆ ಜಯ ಇದ್ದೇ ಇರುತ್ತದೆ ಎಂಬುದಕ್ಕೆ ಈ ಹೋರಾಟವೇ ಸಾಕ್ಷಿಯಾಗಿದೆ ಎಂದರು.
ಕುಂದಗೋಳದ ಬಸವಣ್ಣಜ್ಜ ಸ್ವಾಮೀಜಿ ಮಾತನಾಡಿ, ರೈತರು ಹೋರಾಟಕ್ಕೆ ಇಳಿಯುವ ಮುನ್ನವೇ ಸರ್ಕಾರ ಎಚ್ಚೆತ್ತು ಅವರ ಸಮಸ್ಯೆ ಪರಿಹರಿಸಲು ಮುಂದಾಗಬೇಕು ಎಂದು ತಿಳಿಸಿದರು.
ಬಟಗುರ್ಕಿಯ ಗದಗೆಯ್ಯ ದೇವರು, ಮಾಜಿ ಶಾಸಕ ರಾಮಣ್ಣ ಲಮಾಣಿ, ಮಹೇಶ ಹೊಗೆಸೊಪ್ಪಿನ, ಚಂದ್ರಣ್ಣ ಮುಂಡವಾಡ, ಶಿವಣ್ಣ ಬಂಕಾಪುರ, ಶಿವನಗೌಡ್ರ ಪಾಟೀಲ, ವೀರೇಂದ್ರಗೌಡ ಪಾಟೀಲ, ಟಾಕಪ್ಪ ಸಾತಪುತೆ, ಸೋಮಣ್ಣ ಡಾಣಗಲ್ಲ, ಸುರೇಶ, ಅಭಯ ಜೈನ್, ದಾದಾಪೀರ್ ಮುಚ್ಛಾಲೆ, ಶಿವಾನಂದ ಲಿಂಗಶೆಟ್ಟಿ, ಗುರಪ್ಪ ಮುಳಗುಂದ, ವಿರುಪಾಕ್ಷಪ್ಪ ಮುದಕಣ್ಣವರ, ಪವನ ಬಂಕಾಪುರ, ಸುರೇಶ ಹಟ್ಟಿ, ರಾಮಣ್ಣ ಗೌರಿ, ಪ್ರಕಾಶ ಕೊಂಚಿಗೇರಿಮಠ ಸೇರಿದಂತೆ ಮತ್ತಿತರರು ಇದ್ದರು.
ಶುಕ್ರವಾರ ಬೆಳಿಗ್ಗೆಯಿಂದಲೂ ಹೋರಾಟ ಮುಂದುವರೆಸಿದ್ದ ರೈತರು ಬೆಳಿಗ್ಗೆ ಕುಂದಗೋಳ ಶ್ರೀಗಳ ನೇತೃತ್ವದಲ್ಲಿ ಪಾಳಾ-ಬಾದಾಮಿ ರಸ್ತೆಯಲ್ಲಿ ಬಾರಕೋಲು ಚಳುವಳಿ ಮಾಡಿ ಪ್ರತಿಭಟಿಸಿದ್ದರು. ಜೋಗತಿ ಭರಮಮ್ಮ ಬಸಾಪುರ, ನಾಮದೇವ ಮಾಂಡ್ರೆ ಜಾನಪದ ಗೀತೆಗಳ ಮೂಲಕ ಗಮನ ಸೆಳೆದಿದ್ದರು.


