ವಿಜಯಸಾಕ್ಷಿ ಸುದ್ದಿ, ಗದಗ: ಮುಗ್ಧ ರೈತನ ಮೇಲೆ ತೀವ್ರ ಹಲ್ಲೆ ನಡೆಸಿ ಸಹಸ್ರಾರು ರೂಪಾಯಿಗಳನ್ನು ಎಗರಿಸಿರುವ ಶಿರಹಟ್ಟಿ ಪಿಎಸ್‌ಐ ಈರಣ್ಣ ರಿತ್ತಿ ಅವರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ನ. 24ರಿಂದ ಶಿರಹಟ್ಟಿ ತಹಸೀಲ್ದಾರ ಕಚೇರಿಯ ಆವರಣದಲ್ಲಿ ನೂರಾರು ಜನ ಹಿಂದೂ ಬಾಂಧವರು, ರೈತರು ಅನಿರ್ದಿಷ್ಟಾವಧಿ ಧರಣಿ ನಡೆಸಲಿದ್ದಾರೆ ಎಂದು ಹಿಂದೂ ಸಂಘಟನೆಗಳ ಹೋರಾಟಗಾರ ರಾಜೂ ಖಾನಪ್ಪನವರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಶಿರಹಟ್ಟಿ ಪಿಎಸ್‌ಐ ಈರಣ್ಣ ರಿತ್ತಿ ಕಳೆದ 15 ದಿನಗಳ ಹಿಂದೆ ಜಮೀನಿನಿಂದ ಮನೆಗೆ ವಾಪಸ್ಸು ಬರುತ್ತಿದ್ದ ರೈತ ಸೋಮಪ್ಪ ಬೂದಪ್ಪ ಲಮಾಣಿ ಎಂಬುವವರ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ತಮ್ಮ ಮೇಲೆ ಏಕೆ ಹಲ್ಲೆ ನಡೆಸುತ್ತಿದ್ದೀರೆಂದು ಪ್ರಶ್ನಿಸಿದ ಸೋಮಪ್ಪ ಲಮಾಣಿ ಬಳಿ ಇದ್ದ 32 ಸಾವಿರ ರೂಪಾಯಿಗಳನ್ನು ಕಸಿದುಕೊಂಡು ಈಸ್ಟೇಟಾಟದಲ್ಲಿ ತೊಡಗಿದ್ದಂತೆ ಪ್ರಕರಣ ದಾಖಲಿಸಿದ್ದಾರೆಂದು ಆರೋಪಿಸಿದರು.
ಜಮೀನಿನಿಂದ ಮನೆಗೆ ತೆರಳುತ್ತಿದ್ದ ವ್ಯಕ್ತಿಯ ಮೇಲೆ ದೌರ್ಜನ್ಯ ನಡೆಸಿ ಹಣ ಕಸಿದುಕೊಂಡದ್ದನ್ನು ಪ್ರಶ್ನಿಸಿದ್ದಕ್ಕೆ ಪಿಎಸ್‌ಐ ಈರಣ್ಣ ರಿತ್ತಿ ಸೋಮಪ್ಪ ಲಮಾಣಿಗೆ ಮನಬಂದಂತೆ ಬೈದು ಜಾತಿ ನಿಂದನೆ ಮಾಡಿದ್ದಾರೆ. ಓರ್ವ ಪೊಲೀಸ್ ಅಧಿಕಾರಿಯೇ ವಿನಾಕಾರಣ ರೈತರ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದಲ್ಲಿ ಯಾರ ಬಳಿ ನ್ಯಾಯ ಕೇಳಬೇಕೆಂದು ಪ್ರಶ್ನಿಸಿದರು.
ಶಿರಹಟ್ಟಿ ಪಿಎಸ್‌ಐ ಈರಣ್ಣ ರಿತ್ತಿ ಈ ಹಿಂದೆ ಅನೇಕ ವರ್ಷಗಳ ಕಾಲ ಶಿರಹಟ್ಟಿ ಪಿಎಸ್‌ಐ ಆಗಿಯೇ ಕಾರ್ಯನಿರ್ವಹಿಸಿದ್ದಾರೆ. ಶಿರಹಟ್ಟಿ ತಾಲೂಕಿನಲ್ಲಿನ ಆಕ್ರಮಗಳಿಂದಾಗಿ ಪ್ರತಿ ತಿಂಗಳೂ ಯಥೇಚ್ಛವಾಗಿ ಅಕ್ರಮ ಹಣ ಸಂಪಾದಿಸುತ್ತಿರುವ ಈರಣ್ಣ ರಿತ್ತಿ ಶಿರಹಟ್ಟಿ ತಾಲೂಕು ಬಿಟ್ಟು ಕದಲಲು ತಯಾರಿಲ್ಲ. ಕಳೆದ ವರ್ಷದ ವಿಜಯದಶಮಿಯಂದು ಲಕ್ಷ್ಮೇಶ್ವರದ ಪಿಎಸ್‌ಐ ಆಗಿದ್ದ ಸಂದರ್ಭದಲ್ಲಿ ಶಾಂತಿಯುತವಾಗಿ ದುರ್ಗಾ ಮೂರ್ತಿಯನ್ನು ವಿಸರ್ಜಿಸಿ ಮನೆಗೆ ತೆರಳುತ್ತಿದ್ದ ಮುಗ್ಧ ಗೋಸಾವಿ ಜನಾಂಗದ ಮೇಲೆ ಲಾಠಿಯಿಂದ ಥಳಿಸಿದ್ದರು. ಈ ಘಟನೆಯನ್ನು ಖಂಡಿಸಿ ತಹಸೀಲ್ದಾರ ಕಚೇರಿ ಮುಂದೆ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಗೋಸಾವಿ ಜನಾಂಗದವರು 10 ದಿನಗಳ ಕಾಲ ಅಹೋರಾತ್ರಿ ಧರಣಿ ಸತ್ಯಾಗ್ರಹ, ಲಕ್ಷ್ಮೇಶ್ವರ ಬಂದ್‌ನಂತೆ ಹೋರಾಟ ನಡೆಸಿದ ನಂತರ ಅಂದಿನ ಪೊಲೀಸ್ ವೀರಶ್ಠಾಧಿಕಾರಿಯಾಗಿದ್ದ ಬಾಬಾಸಾಹೇಬ ನೇಮಗೌಡ ರಿತ್ತಿ ಅವರನ್ನು ಬೆಳಗಾವಿಗೆ ವರ್ಗಾಯಿಸಿದ್ದರು. ಇದೀಗ ಮತ್ತೆ ಶಿರಹಟ್ಟಿ ಪಿಎಸ್‌ಐ ಆಗಿ ಆಗಮಿಸಿದ್ದಾರೆಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಸತೀಶ ಕುಂಬಾರ, ಸಂತೋಷ ಕುರಿ, ಕುಮಾರ ನಡಗೇರಿ, ಶಿವಯೋಗಿ ಹಿರೇಮಠ, ವೆಂಕಟೇಶ ದೊಡ್ಡಮನಿ, ಗಂಗವ್ವ ಲಮಾಣಿ, ಪ್ರಕಾಶ ಬಡೆಣ್ಣವರ, ಪರಶುರಾಮ ಡೊಂಕಬಳ್ಳಿ, ನಿಖಿಲ ಗೋಸಾವಿ, ಕಿರಣ ಹಿರೇಮಠ ಮುಂತಾದವರಿದ್ದರು.
ಸರಕಾರ ಕೂಡಲೇ ಶಿರಹಟ್ಟಿ ಪಿಎಸ್‌ಐ ಈರಣ್ಣ ರಿತ್ತಿ ಅವರನ್ನು ಗದಗ ಜಿಲ್ಲೆಯಿಂದ ಬೇರೆ ಕಡೆಗೆ ವರ್ಗಾಯಿಸಬೇಕು. ಒಂದು ವೇಳೆ ವರ್ಗಾಯಿಸದಿದ್ದಲ್ಲಿ ಧರಣಿ ಸತ್ಯಾಗ್ರಹ, ರಸ್ತೆ ತಡೆ, ಅಹೋರಾತ್ರ ಧರಣಿ, ಉಪವಾಸ ಸತ್ಯಾಗ್ರಹ, ಶಿರಹಟ್ಟಿ ಬಂದ್‌ನಂತೆ ಉಗ್ರ ಹೋರಾಟ ಪ್ರಾರಂಭಿಸುವುದು ಅನಿವಾರ್ಯವಾಗುತ್ತದೆ ಎಂದು ರಾಜೂ ಖಾನಪ್ಪನವರ ಎಚ್ಚರಿಸಿದರು.


