ಗದಗ:- ರೋಣ ವಿಧಾನಸಭಾ ಕ್ಷೇತ್ರದ ಶಾಸಕ ಜಿ ಎಸ್ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಶಾಸಕರ ಅಭಿಮಾನಿಗಳಿಬ್ಬರು ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗಜೇಂದ್ರಗಡ ಪಟ್ಟಣದಲ್ಲಿ ಜರುಗಿದೆ.
ಎಸ್, ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ಪುನರ್ ರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಹೀಗಾಗಿ ರೋಣ ಕ್ಷೇತ್ರದ ಶಾಸಕ ಜಿ ಎಸ್ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಇಂದು ಗಜೇಂದ್ರಗಡ ಪಟ್ಟಣದ ಕಾಲಕಾಲೇಶ್ವರ ಸರ್ಕಲ್ ಬಳಿ ಮಹಿಳಾ ಘಟಕದಿಂದ ಬೃಹತ್ ಪ್ರತಿಭಟನೆ ಜರುಗಿದೆ. ಈ ವೇಳೆ ಸಂಗಪ್ಪ ತೇಲಿ, ರವಿಕುಮಾರ್ ಎಂಬುವವರು ದಿಢೀರ್ ಮೈಮೇಲೆ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಈ ವೇಳೆ ಸ್ಥಳದಲ್ಲಿ ಇದ್ದ ಇನ್ನುಳಿದ ಕಾರ್ಯಕರ್ತರು ಡೀಸೆಲ್ ಡಬ್ಬಿ ಕಸಿದುಕೊಂಡು ರಕ್ಷಣೆ ಮಾಡಿದ್ದಾರೆ. ಘಟನೆ ಹಿನ್ನೆಲೆ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿ ಆಗಿತ್ತು. ಶಾಸಕ ಜಿ ಎಸ್ ಪಾಟೀಲ್ ಗೆ ಪ್ರತೀ ಬಾರಿ ಅನ್ಯಾಯವಾಗಿದೆ. ಹೀಗಾಗಿ ಹೈಕಮಾಂಡ್ ಈ ಬಾರಿ ಜಿ ಎಸ್ ಪಾಟೀಲ್ ಹಾಗೂ ರೋಣ ಕ್ಷೇತ್ರಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಮಾಡಿದ್ದು, ಪ್ರತಿಭಟನೆಯಲ್ಲಿ ಸಾಕಷ್ಟು ಕಾರ್ಯಕರ್ತರು ನೆರೆದಿದ್ದರು. 50 ವರ್ಷಗಳಿಂದ ಜಿ ಎಸ್ ಪಾಟೀಲ್ ಅವರು ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ನಾಲ್ಕು ಭಾರೀ ಶಾಸಕರಾಗಿದ್ದಾರೆ. ಆದರೆ ಅವರಿಗೆ ಇದುವರೆಗೂ ಸಚಿವ ಸ್ಥಾನ ಸಿಕ್ಕಿಲ್ಲ. ಈ ಬಾರಿ ನೀಡದಿದ್ರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ಕಾರ್ಯಕರ್ತರು ನೀಡಿದ್ದಾರೆ.
ಹಿರಿಯ ನಾಯಕರ ಮೇಲೂ ಆಕ್ರೋಶ:
ಜಿ ಎಸ್ ಪಾಟೀಲ್ ಅವರಿಗೆ ಸಚಿವ ಸ್ಥಾನ ಕೊಡುವಂತೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಪ್ರತಿಭಟನಾಕಾರರು, ಜಿಲ್ಲೆಯ ಕಾಂಗ್ರೆಸ್ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿ ಎಸ್ ಪಾಟೀಲ್ ಅವರಿಗೆ ಒಮ್ಮೆಯಾದರೂ ಹೆಚ್ ಕೆ ಪಾಟೀಲ್ ಸಚಿವ ಸ್ಥಾನ ಬಿಟ್ಟು ಬಿಡಬೇಕು ಎಂದು ಆಗ್ರಹ ಮಾಡಿದ್ದಾರೆ.


