ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರಾಜ್ಯ ಸರ್ಕಾರ ಕೇವಲ 10 ಲಕ್ಷ ಮೆಟ್ರಿಕ್ ಟನ್ ಮೆಕ್ಕೆ ಜೋಳ ಖರೀದಿಸುವ ಭರವಸೆ ನೀಡಿ, ಕೇಂದ್ರ ಸರ್ಕಾರದ ಕಡೆಗೆ ಕೈ ತೋರಿಸುವ ಬದಲು, ರಾಜ್ಯ ಸರ್ಕಾರದ ಆವರ್ತ ನಿಧಿಯಿಂದ ಖರೀದಿ ಮಾಡಲು ಅವಕಾಶ ಇದೆ. ಸುಮಾರು 200-300 ಕೋಟಿ ರೂ ಖರ್ಚು ಮಾಡಿ ಮೆಕ್ಕೆಜೋಳ ಖರೀದಿಸಿ ರೈತರ ರಕ್ಷಣೆ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಶನಿವಾರ ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ ಕ್ರಾಸ್‌ನಲ್ಲಿ ಸಮಗ್ರ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ ಲಕ್ಷ್ಮೇಶ್ವರ, ಶಿರಹಟ್ಟಿ ಹಾಗೂ ಮುಂಡರಗಿ ತಾಲೂಕಿನ ರೈತರು ನಡೆಸುತ್ತಿರುವ ಪ್ರತಿಭಟನಾ ನಿರತ ರೈತರ ಸ್ಥಳಕ್ಕೆ ಭೇಟಿ ನೀಡಿ, ರೈತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಳೆದ ವರ್ಷ 15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 54 ಲಕ್ಷ ಟನ್ ಮೆಕ್ಕೆಜೋಳ ಬೆಳೆಯಲಾಗಿತ್ತು. ಈ ವರ್ಷ 17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದರೂ 54 ಲಕ್ಷ ಮೆಟ್ರಿಕ್ ಟನ್ ಬೆಳೆ ಬಂದಿದೆ. ಇಂತಹ ಸಂದರ್ಭದಲ್ಲಿ ಕೇವಲ 10 ಲಕ್ಷ ಟನ್ ಖರೀದಿಸುವ ಹೇಳಿಕೆ ಬಿಟ್ಟು, ಹೆಚ್ಚಿಗೆ ಖರೀದಿಸಲು ಮುಂದಾಗಬೇಕು. ಲಕ್ಷ್ಮೇಶ್ವರದಲ್ಲಿ ಗೋವಿನಜೋಳ ಖರೀದಿ ಕೇಂದ್ರಕ್ಕಾಗಿ ರೈತರು ಮಾಡಿದ ಹೋರಾಟ ಸರ್ಕಾರದ ಕಣ್ಣು ತೆರೆಯುವಂತೆ ಮಾಡಿದ್ದು, ಅದಕ್ಕಾಗಿ ರೈತರ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾನವಾಗಿ ಗಮನ ಹರಿಸಬೇಕು ಎಂದರು.
ಈ ವೇಳೆ ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ, ಬಸವರಾಜ ಬೆಂಡಿಗೇರಿ, ಪೂರ್ಣಾಜಿ ಖರಾಟೆ, ಮಹೇಶ ಹೊಗೆಸೊಪ್ಪಿನ್, ಎಂ.ಎಸ್. ದೊಡ್ಡಗೌಡ್ರ ಸೇರಿದಂತೆ ನೂರಾರು ರೈತರು ಹಾಜರಿದ್ದರು.
ರೈತನ ಬದುಕು ಅನಿಶ್ಚಿತತೆಯಿಂದ ಕೂಡಿದೆ. ರೈತನ ಬದುಕು ಬಯಲ ಬದುಕು. ಒಳ್ಳೆ ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಮಾಡುವುದು, ಮಳೆ ಬಂದರೆ ಬೆಳೆ, ಬೆಳೆ ಬಂದರೆ ಬೆಲೆ ಸಿಗದು. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಒಂದೇ ನೀತಿ ಇಟ್ಟುಕೊಂಡು ಕೆಲಸ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ. ಬೆಂಬಲ ಬೆಲೆ ಯೋಜನೆಯ ಪರಿಣಾಮ ರೈತರಿಗೂ ಅನುಕೂಲವಾಗುತ್ತದೆ. ಖರೀದಿ ಮಾಡಿದ ಸರ್ಕಾರಕ್ಕೂ ನಷ್ಟವಾಗುವುದಿಲ್ಲ. ಕೇಂದ್ರ-ರಾಜ್ಯ ಸರ್ಕಾರ ಸಂಘರ್ಷ ಮಾಡಿದರೆ ಇಬ್ಬರ ನಡುವೆ ಕೂಸು ಬಡವಾದಂತೆ ಆಗುತ್ತದೆ. ರೈತ ಯಾವುದೇ ಪಕ್ಷಕ್ಕೆ ಸೇರಿಲ್ಲ. ಎಲ್ಲ ಪಕ್ಷಗಳು ರೈತನಿಗೆ ಸೇರಿವೆ ಎಂದು ಸಂಸದ ಬೊಮ್ಮಾಯಿ ಹೇಳಿದರು.


