ಬೆಂಗಳೂರು: ಲೈಂಗಿಕ ಸಮಸ್ಯೆಗೆ ಪರಿಹಾರ ನೀಡ್ತೀವಿ ಅಂತಾ ಟೆಕ್ಕಿಗೆ 48 ಲಕ್ಷ ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ತೇಜಸ್ ಎಂಬ ಟೆಕ್ಕಿಗೆ 48 ಲಕ್ಷ ವಂಚನೆ ಮಾಡಲಾಗಿದ್ದು, ಟೆಂಟ್ ನ ಗುರೂಜಿ ನಂಬಿ ಕಿಡ್ನಿ ಸಮಸ್ಯೆ ತಂದುಕೊಳ್ಳೋದಲ್ದೆ 48 ಲಕ್ಷ ಕಳೆದುಕೊಂಡಿದ್ದಾರೆ. ಜ್ಞಾನ ಭಾರತೀ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಲೈಂಗಿಕ ಸಮಸ್ಯೆಯಿಂದ ಬಳಲುತ್ತಿದ್ದ ಟೆಕ್ಕಿ ತೇಜಸ್ ಎಂಬವರು ಕೆಂಗೇರಿ ಸನೈರಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆಸ್ಪತ್ರೆಗೆ ಹೋಗಿ ಬರುವಾಗ ರಸ್ತೆಯ ಪಕ್ಕದ ಟೆಂಟ್ ಬಳಿ ಹಾಕಲಾಗಿದ್ದ ಲೈಂಗಿಕ ಸಮಸ್ಯೆಗೆ ಚಿಕಿತ್ಸೆ ಬೋರ್ಡ್ ಗಮನಿಸಿದ್ದ ತೇಜಸ್ ಅಲ್ಲಿಗೂ ಭೇಟಿ ನೀಡಿದ್ದರು. ಆ ವೇಳೆ ಅಲ್ಲಿದ್ದಾತ ವಿಜಯ್ ಗುರೂಜಿಗೆ ಹೇಳಿ ಚಿಕಿತ್ಸೆ ಕೊಡಿಸುತ್ತೇನೆಂದು ಟೆಕ್ಕಿಗೆ ಭರವಸೆ ನೀಡಿದ್ದಾನೆ. 1 ಗ್ರಾಂ ಔಷಧಿಗೆ 1,60,000 ರೂ. ಬೆಲೆ ಇರುವ ದೇವರಾಜ್ ಬೂಟಿ ಹೆಸರಿನ ಔಷಧವನ್ನು ಯಶವಂತಪುರದ ವಿಜಯಲಕ್ಷ್ಮೀ ಆಯುರ್ವೇದಿಕ್ ಶಾಪ್ನಲ್ಲಿ ಮಾತ್ರ ಖರೀದಿಸಬೇಕೆಂದು ಒತ್ತಾಯ ಮಾಡಿದ್ದಾನೆ.
ಅಲ್ಲದೆ ಆನ್‌ಲೈನ್ ಪೇಮೆಂಟ್ ಬೇಡ, ಯಾರ ಜೊತೆಗೆ ಬರಬಾರದೆಂದು ಷರತ್ತು ವಿಧಿಸಿದ್ದ ಎನ್ನಲಾಗಿದೆ. ಆತ ನೀಡಿದ್ದ ಸಲಹೆಯಂತೆ ತೇಜಸ್ ಹಲವು ಬಾರಿ ದೇವರಾಜ್ ಬೂಟಿ & ಭವನ ಬೂಟಿ ತೈಲ ಖರೀದಿಸಿದ್ದರು. ಒಟ್ಟು 17 ಲಕ್ಷ ರೂ.ಗಳನ್ನು ಔಷಧಕ್ಕಾಗಿ ಖರ್ಚು ಮಾಡಿದ್ದರು. ಆ ಬಳಿಕ ಹಣದ ಕೊರತೆಯಿಂದ HDFC ಬ್ಯಾಂಕ್ ಖಾತೆಯಲ್ಲಿ 20 ಲಕ್ಷ ರೂ. ಲೋನ್ ಪಡೆದು ಒಟ್ಟು 18 ಗ್ರಾಂ ಔಷಧ ಖರೀದಿಸಿದ್ದರು.
ಸಮಸ್ಯೆ ಇದ್ದಾಗ ಬರದಿದ್ದರೆ ಮತ್ತಷ್ಟು ಸಮಸ್ಯೆ ಆಗುವುದಾಗಿ ಆರೋಪಿಗಳು ತೇಜಸ್ಗೆ ಬೆದರಿಕೆ ಹಾಕಿದ್ದು, ಕೊನೆಗೆ ಆರೋಗ್ಯ ಸಮಸ್ಯೆಯಿಂದ ರಕ್ತ ಪರೀಕ್ಷೆ ಮಾಡಿಸಿದಾಗ ಕಿಡ್ನಿಗೆ ಸಮಸ್ಯೆ ಆಗಿರುವುದು ಪತ್ತೆಯಾಗಿದೆ. ಆಯುರ್ವೇದ ಚಿಕಿತ್ಸೆಯಿಂದ ಕಿಡ್ನಿಗೆ ಸಮಸ್ಯೆ ಆಗಿರುವುದು ಗೊತ್ತಾದ ಬಳಿಕ ಎಚ್ಚೆತ್ತ ಅವರು, ಪೊಲೀಸರ ಮೊರೆ ಹೋಗಿದ್ದಾರೆ. ಘಟನೆ ಸಂಬಂಧ ವಿಜಯ್ ಗೂರೂಜಿ ಎಂಬವರು ಸೇರಿ ವಿಜಯಲಕ್ಷ್ಮೀ ಆಯುರ್ವೇದಿಕ್ ಶಾಪ್ ವಿರುದ್ಧ ಪ್ರಕರಣ ದಾಖಲಾಗಿದೆ.


