ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನವೆಂಬರ್ ಕ್ರಾಂತಿಯ ಚರ್ಚೆ ಇದೀಗ ಇನ್ನಷ್ಟು ಹೆಚ್ಚಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2.5 ವರ್ಷ ಪೂರ್ಣಗೊಳಿಸುತ್ತಿದ್ದ ಹಾಗೆಯೇ ಅಧಿಕಾರ ಹಂಚಿಕೆಯ ಒಳಸುಳಿ ಹೊರಚಿಮ್ಮುವ ಲಕ್ಷಣ ಕಾಣುತ್ತಿದೆ. ಡಿ.ಕೆ.ಶಿವಕುಮಾರ್ ಬಣದ ಕೆಲವರು ದೆಹಲಿ ಯಾತ್ರೆ ನಡೆಸಿದ್ದರೆ, ಇತ್ತ ಸಿಎಂ ಆಪ್ತ ಬಣದ ಸಚಿವರು ಡಿನ್ನರ್ ಮೀಟಿಂಗ್ ಆರಂಭಿಸಿದ್ದಾರೆ.
ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮೂರು ದಿನದಿಂದ ಇಲ್ಲೇ ಇದ್ದೇನೆ. ನನಗೆ ತುಂಬಾ ಬೇಜಾರ್ ಆಗಿದೆ. ನನ್ನ ಹತ್ತಿರ ಹೇಳಲು ಏನು ಇಲ್ಲ.ಸಧ್ಯದ ಬೆಳವಣಿಗೆ ಬಗ್ಗೆ ನಾನು ಏನು ಹೇಳಲ್ಲ.
ನಡೆದ ವಿದ್ಯಮಾನದ ಬಗ್ಗೆ ನನಗೆ ಹೇಳಲು ಏನೂ ಇಲ್ಲ. ದಯವಿಟ್ಟು ನೀವೂ ಇಲ್ಲಿ ಕಾಯುವುದು ಬೇಡ. ಏನೇ ಇದ್ದರೂ ಹೈಕಮಾಂಡ್ ತೀರ್ಮಾನ ತಗೆದುಕೊಳ್ಳುತ್ತೆ ಎಂದು ಕರ್ನಾಟಕ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಗುಂಪುಗಾರಿಕೆ ಬಗ್ಗೆ ಬಹಿರಂಗವಾಗಿಯೇ ಬೇಸರ ಹೊರಹಾಕಿದರು.
ಅಧಿಕಾರ ಹಂಚಿಕೆ ಚರ್ಚೆ ತೀವ್ರ ಸ್ವರೂಪ ಪಡೆಯುತ್ತಿದ್ದು, ಸಿದ್ದರಾಮಯ್ಯ ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ. ನಾನೇ ಮುಂದಿನ ಬಜೆಟ್ ಮಂಡಿಸುತ್ತೇನೆ ಎನ್ನುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಇತ್ತ ಡಿ.ಕೆ.ಬ್ರದರ್ಸ್ ಮನೆಯಲ್ಲೇ ಕೂತು ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಿದ್ದು, ಕೆಲ ಶಾಸಕರ ಜೊತೆಗೂ ಚರ್ಚಿಸಿದ್ದಾರೆ.


