ಬೆಂಗಳೂರು:- ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಕಲಬುರಗಿ-ಬೆಂಗಳೂರು ವಿಶೇಷ ವಾರಾಂತ್ಯ ರೈಲು ಸೇವೆ ಆರಂಭವಾಗಲಿದೆ.
ಕಲಬುರಗಿ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಡುವೆ ಕೇಂದ್ರ ರೈಲ್ವೆ ಹೊಸ ವಾರಾಂತ್ಯ ವಿಶೇಷ ರೈಲುಗಳ ಸೇವೆ ಆರಂಭಿಸಿದ್ದು, ಈ ರೈಲುಗಳು ನವೆಂಬರ್ ಅಂತ್ಯದಿಂದ ಡಿಸೆಂಬರ್ ಅಂತ್ಯದವರೆಗೆ ಸಂಚರಿಸಲಿವೆ. ಈ ರೈಲುಗಳು ಕರ್ನಾಟಕ ಮತ್ತು ಆಂಧ್ರಪ್ರದೇಶದಾದ್ಯಂತ ಪ್ರಮುಖ ನಿಲ್ದಾಣಗಳಲ್ಲಿ ನಿಲ್ಲಲಿದ್ದು, ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣ ಒದಗಿಸಲು ಈ ಸೇವೆಯನ್ನು ಒದಗಿಸಲಾಗುತ್ತಿದೆ.
ವಿಶೇಷ ರೈಲಿನ ವೇಳಾಪಟ್ಟಿ:-
ನವೆಂಬರ್ 23 ರಿಂದ ಕಲಬುರಗಿ-ಬೆಂಗಳೂರು ಕಂಟೋನ್ಮೆಂಟ್ ವಿಶೇಷ ರೈಲು (ರೈಲು ಸಂಖ್ಯೆ 06208) ಡಿಸೆಂಬರ್ 28 ರವರೆಗೆ ಪ್ರತಿ ಭಾನುವಾರ ಸಂಚರಿಸಲಿದ್ದು, ಕಲಬುರಗಿಯಿಂದ ಬೆಳಿಗ್ಗೆ 09:35 ಕ್ಕೆ ಹೊರಟು ರಾತ್ರಿ 20:30 ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.
ಹಿಂದಿರುಗುವಾಗ,ಬೆಂಗಳೂರು ಕಂಟೋನ್ಮೆಂಟ್- ಕಲಬುರಗಿ ರೈಲು (ರೈಲು ಸಂಖ್ಯೆ 06207)ನವೆಂಬರ್ 22 ರಿಂದ ಡಿಸೆಂಬರ್ 27 ರವರೆಗೆ ಪ್ರತಿ ಶನಿವಾರ ಕಾರ್ಯನಿರ್ವಹಿಸಲಿದ್ದು, ಬೆಂಗಳೂರು ಕಂಟೋನ್ಮೆಂಟ್‌ನಿಂದ ಸಂಜೆ 7:20 ಕ್ಕೆ ಹೊರಟು ಮರುದಿನ ಬೆಳಿಗ್ಗೆ 07:30 ಕ್ಕೆ ಆಗಮಿಸಲಿದೆ. ಈ ಎರಡೂ ಮಾರ್ಗದಲ್ಲಿ ರೈಲುಗಳು 6 ಬಾರಿ ಸಂಚರಿಸಲಿವೆ.
ಈ ವಿಶೇಷ ರೈಲು ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯ ರಸ್ತೆ, ರಾಯಚೂರು, ಕೃಷ್ಣಾ, ಯಾದಗಿರಿ ಮತ್ತು ಶಹಾಬಾದ್ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ. ಪ್ರತಿ ರೈಲಿನಲ್ಲಿ ಒಟ್ಟು 22 ಕೋಚ್‌ಗಳು ಇರಲಿದ್ದು, 20 ಸ್ಲೀಪರ್ ಕ್ಲಾಸ್ ಕೋಚ್‌ಗಳು, 2 ಸೆಕೆಂಡ್ ಕ್ಲಾಸ್ ಲಗೇಜ್-ಕಮ್- ಅಂಗವಿಕಲರ ಕೋಚ್‌ಗಳು ಇರಲಿವೆ.
ಈ ವಾರಾಂತ್ಯದ ವಿಶೇಷ ರೈಲುಗಳ ಬುಕಿಂಗ್‌ಗಳು ವಿಶೇಷ ಶುಲ್ಕಗಳನ್ನು ಹೊಂದಿದ್ದು, ಎಲ್ಲಾ ಕಂಪ್ಯೂಟರ್ ಸೆಂಟರ್ಗಳಲ್ಲಿ ಮತ್ತು IRCTC ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಕಾಯ್ದಿರಿಸದ ಕೋಚ್‌ಗಳನ್ನು ಬಳಸುವ ಪ್ರಯಾಣಿಕರು ನಿಲ್ದಾಣದ ಕೌಂಟರ್‌ಗಳು ಅಥವಾ UTS ಅಪ್ಲಿಕೇಶನ್ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿದೆ.



