ದರ್ಶನ್ ಅಭಿನಯದ ‘ಡೆವಿಲ್’ ಚಿತ್ರದ ಹೊಸ ಹಾಡಾದ ‘ಅಲೋಹೋಮರ’ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ವಿವಾದಕ್ಕೆ ಗುರಿಯಾಗಿದೆ. ಅಜನೀಶ್ ಲೋಕನಾಥ್ ಸಂಯೋಜಿಸಿರುವ ಈ ಹಾಡಿನ ‘ರತತ್ತತ್ತ ಥಾ’ ಎಂಬ ಟ್ಯೂನ್ ತಮ್ಮದೇ ರಚನೆಗೆ ಹೋಲಿಕೆಯಾಗುತ್ತದೆ ಎಂದು ಯುವ ಸಂಗೀತ ನಿರ್ದೇಶಕ ತನ್ಮಯ್ ಗುರುರಾಜ್ ಹೇಳಿದ್ದಾರೆ.
ತನ್ಮಯ್ ಗುರುರಾಜ್ ಅವರು ತಮ್ಮ ‘ಮಿಸ್ಸಿಂಗ್’ ಚಿತ್ರದ ಹಾಡಿನ ಟ್ಯೂನ್ ಮತ್ತು ‘ಅಲೋಹೋಮರ’ ಹಾಡಿನ ಟ್ಯೂನ್‌ವನ್ನು ಒಂದರ ಹಿಂದೆ ಒಂದರಂತೆ ಪ್ಲೇ ಮಾಡಿಸಿ, ಎರಡೂ ಒಂದೇ ರೀತಿಯದ್ದಾಗಿರುವುದನ್ನು ಸಾಕ್ಷಿಯೊಂದಿಗೆ ತೋರಿಸಿದ್ದಾರೆ.
ಆದರೆ ತನ್ಮಯ್ ನೇರವಾಗಿ ಅಜನೀಶ್ ಅವರ ಮೇಲೆ ಕೃತಿಚೌರ್ಯದ ಆರೋಪ ಮಾಡಿಲ್ಲ.
“ಸಂಗೀತವು ಕ್ರಿಯಾತ್ಮಕ ಕ್ಷೇತ್ರ. ಒಬ್ಬರ ಆಲೋಚನೆ ಇನ್ನೊಬ್ಬರಿಗೂ ಬಂದಿರಬಹುದು. ನಾನು ಕನ್ನಡಿಗರು ಹೆಮ್ಮೆ ಪಡುವಂತಹ ಸಂಗೀತ ಕೊಡುವುದೇ ನನ್ನ ಗುರಿ” ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೂ ತನ್ಮಯ್ ವಿಡಿಯೋಗೆ ಸ್ಪಷ್ಟನೆ ನೀಡಿರುವ ಅಜನೀಶ್ ಲೋಕನಾಥ್ ಅವರ ಮ್ಯೂಸಿಕ್ ಪಾರ್ಟ್ನರ್ ಅಂಜು ಸಿ.ಆರ್ “ಈ ಟ್ಯೂನ್ ಅನ್ನು ನಾವು ಎರಡು ವರ್ಷಗಳ ಹಿಂದೆಯೇ ರೆಡಿ ಮಾಡಿದ್ದೆವು. ‘ಡೆವಿಲ್’ ಸಿನಿಮಾಗೆ ಅದನ್ನು ಬಳಸಿದ್ದೇವೆ. ತನ್ಮಯ್ ಅವರ ಟ್ಯೂನ್‌ವನ್ನು ಇದೇ ಮೊದಲ ಬಾರಿಗೆ ಕೇಳುತ್ತಿದ್ದೇನೆ. ಅವರ ಪ್ರತಿಭೆಗೆ ಮೆಚ್ಚುಗೆ ಇದ್ದರೂ, ವಿಷಯದ ಸಂಪೂರ್ಣ ಸತ್ಯ ತಿಳಿಯದೇ ಅಜನೀಶ್ ಅವರ ಹೆಸರನ್ನು ಎಳೆದು ತರುವ ಅಗತ್ಯ ಇರಲಿಲ್ಲ” ಎಂದು ಹೇಳಿದ್ದಾರೆ.
‘ಅಲೋಹೋಮರ’ ಹಾಡಿನಲ್ಲಿ ದೊಡ್ಡ ಮಟ್ಟದ ಸಾಮ್ಯತೆ ಕಂಡುಬರದಿದ್ದರೂ, ‘ರತತ್ತತ್ತ ಥಾ’ ಎಂಬ ಒಂದು ಕ್ಯಾಚಿ ಬೀಟ್ ಮಾತ್ರ ‘ಮಿಸ್ಸಿಂಗ್’ ಚಿತ್ರದ ಟ್ಯೂನ್‌ಗೆ ಬಹಳ ಹತ್ತಿರವಾಗಿದೆ ಎಂಬ ಅಭಿಮಾನಿಗಳ ಮತ್ತು ನೆಟ್ಟಿಗರ ಅಭಿಪ್ರಾಯ. ಟೆಂಪೊ ಮತ್ತು ಸ್ಪೀಡ್ ಸ್ವಲ್ಪ ಬದಲಾಗಿರುವುದನ್ನು ಹೊರತಿಟ್ಟು ಟ್ಯೂನ್‌ನ ಮೂಲ ಧ್ವನಿ ಸಮಾನವಾಗಿದೆ ಎನ್ನಲಾಗಿದೆ.
ಈ ನಡುವೆ, ಅಜನೀಶ್ ಲೋಕನಾಥ್ ಈ ಆರೋಪ ಅಥವಾ ವಿವಾದದ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.


