ಬಾಲಿವುಡ್‌ನ ದಿಗ್ಗಜ ನಟ ಧರ್ಮೇಂದ್ರ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ. ಕೆಲವು ದಿನಗಳಿಂದ ಅವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಹದಗೆಟ್ಟ ನಂತರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನವೆಂಬರ್ 10ರಂದು ಅವರ ಸ್ಥಿತಿ ಗಂಭೀರವಾಗಿದ್ದುದರಿಂದ ವೈದ್ಯಕೀಯ ತಂಡ ಹೆಚ್ಚಿನ ಚಿಕಿತ್ಸೆ ನೀಡುತ್ತಿದ್ದರೂ, ಇಂದು 90ನೇ ವಯಸ್ಸಿನಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಧರ್ಮೇಂದ್ರ ಅವರ ನಿಧನ ದೇಶಾದ್ಯಂತ ದುಃಖದ ಅಲೆ ಎಬ್ಬಿಸಿದೆ. ಕುಟುಂಬದ ಸದಸ್ಯರು, ಅಭಿಮಾನಿಗಳು ಭಾವನಾತ್ಮಕವಾಗಿ ಕಂಗಾಲಾಗಿದ್ದಾರೆ.
ಆರು ದಶಕಗಳ ಕಾಲ ಹಿಂದಿ ಸಿನಿರಂಗವನ್ನು ತನ್ನ ಅಭಿನಯದಿಂದ ಮೆರಗುಗೊಳಿಸಿದ ಧರ್ಮೇಂದ್ರ, 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಅಪಾರ ಜನಪ್ರಿಯತೆ ಗಳಿಸಿದ್ದರು. ಶೋಲೇ, ಚುಪ್ಕೆ ಚುಪ್ಕೆ, ಸೀತಾ ಔರ್ ಗೀತಾ, ಧರಂ ವೀರ್ ಸೇರಿದಂತೆ ಅನೇಕ ಸೂಪರ್‌ಹಿಟ್ ಸಿನಿಮಾಗಳನ್ನು ಕೊಡುತ್ತಿರುವ ಹೆಗ್ಗಳಿಕೆ ಅವರದ್ದು. ಒಂದೇ ವರ್ಷದಲ್ಲಿ ಏಳು-ಎಂಟು ಹಿಟ್ ಚಿತ್ರಗಳನ್ನು ನೀಡಿದ ದಾಖಲೆಗೂ ಅವರು ಹೆಸರಾಗಿದ್ದರು.
ಇತ್ತೀಚೆಗಷ್ಟೆ ಬಿಡುಗಡೆಯಾದ ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ ಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಡಿಸೆಂಬರ್ 25ರಂದು ಬಿಡುಗಡೆಯಾಗಲಿರುವ ಅಗಸ್ತ್ಯ ನಂದ ಅವರ ಇಕ್ಕಿಸ್ ಚಿತ್ರದಲ್ಲೂ ಧರ್ಮೇಂದ್ರ ಕಾಣಿಸಿಕೊಳ್ಳುತ್ತಿದ್ದಾರೆ.
1980ರಲ್ಲಿ ಹೇಮಾ ಮಾಲಿನಿಯನ್ನು ವಿವಾಹವಾದ ಧರ್ಮೇಂದ್ರ, ತಮ್ಮ ಪುತ್ರರಾದ ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್‌ರನ್ನು ಬಾಲಿವುಡ್‌ಗೆ ಪರಿಚಯಿಸಿ, ಇಬ್ಬರನ್ನೂ ಯಶಸ್ವಿ ನಟರನ್ನಾಗಿ ಬೆಳೆಸಿದ್ದಾರೆ. ಹಿಂದಿ ಚಿತ್ರರಂಗಕ್ಕೆ ಧರ್ಮೇಂದ್ರ ನೀಡಿದ ಕೊಡುಗೆ ಅಪಾರವಾಗಿದ್ದು, ಅವರ ಅಗಲಿಕೆ ಅಪಾರ ಶೂನ್ಯವನ್ನುಂಟು ಮಾಡಿದೆ.


