ಬೆಂಗಳೂರು: ಮುಖ್ಯಮಂತ್ರಿ ಕುರ್ಚಿಗಾಗಿ ಕಾದಾಟ ನಡೆಯುತ್ತಿರುವುದರಿಂದ ರೈತರ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನಹರಿಸುತ್ತಿಲ್ಲ. ಸರ್ಕಾರದ ರೈತರ ವಿರೋಧಿ ನಿಲುವಿನ ವಿರುದ್ಧ ಬಿಜೆಪಿ ರೈತ ಮೋರ್ಚಾ ವತಿಯಿಂದ ಹೋರಾಟ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ಜಲಾಶಯ ದುರಸ್ತಿ ಮಾಡದೆ ಎಲ್ಲ ನೀರು ಕರ್ನಾಟಕದಿಂದ ಹೊರಗೆ ಹೋಗಿದೆ. ಮೆಕ್ಕೆಜೋಳ ಕೇಂದ್ರ ಖರೀದಿ ಇನ್ನೂ ಆರಂಭಿಸಿಲ್ಲ. ಹಾಲಿನ ಪ್ರೋತ್ಸಾಹಧನ ಬಾಕಿ ಉಳಿದಿದೆ. ಹೀಗೆ ರೈತರ ಎಲ್ಲ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ಬಿಜೆಪಿ ರೈತ ಮೋರ್ಚಾ ವತಿಯಿಂದ ಎಲ್ಲ ಜಿಲ್ಲೆಗಳಲ್ಲಿ ಹೋರಾಟ ಮಾಡಲಾಗುತ್ತಿದೆ.
ಕಳೆದ ಆರು ತಿಂಗಳಿಂದ ಮುಖ್ಯಮಂತ್ರಿ ಕುರ್ಚಿಗಾಗಿ ಕಾದಾಟ ನಡೆಯುತ್ತಿದೆ. ಯಾರು ಸಿಎಂ ಎಂದು ಯಾರಿಗೂ ತಿಳಿದಿಲ್ಲ. ಶಾಸಕರ ಖರೀದಿ ಆರಂಭವಾಗಿದೆ. ಇವೆಲ್ಲವುಗಳ ನಡುವೆ ಒಬ್ಬರೇ ಒಬ್ಬ ಸಚಿವರು ರೈತರ ಸಮಸ್ಯೆಯನ್ನು ಆಲಿಸುತ್ತಿಲ್ಲ ಎಂದರು.
ಕೇಂದ್ರ ಸರ್ಕಾರದಿಂದ ಬೆಳೆ ಹಾನಿ ಪರಿಹಾರ ನೀಡಲಾಗಿದೆ. ಬಿಜೆಪಿ ಅವಧಿಯಲ್ಲಿ ಮೂರು ಪಟ್ಟು ಅಧಿಕ ಪರಿಹಾರ ನೀಡಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಇನ್ನೂ ಪರಿಹಾರ ನೀಡಿಲ್ಲ. ರೈತರ ವಿರೋಧಿ ಸರ್ಕಾರದ ವಿರುದ್ಧ ನವೆಂಬರ್ 27, 28 ರಂದು ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಹಾಗೂ ಡಿಸೆಂಬರ್ 1, 2 ರಂದು ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ಮಾಡಲಾಗುತ್ತಿದೆ ಎಂದರು.
ಡಿ.ಕೆ.ಶಿವಕುಮಾರ್ ಜೊತೆ ಹತ್ತು ಹನ್ನೆರಡು ಶಾಸಕರಿದ್ದರು ಎಂದು ಮಾಧ್ಯಮಗಳಲ್ಲಿ ವರದಿ ಬಂದಿತ್ತು. ದಿಢೀರನೆ ಆ ಸಂಖ್ಯೆ ಎಪ್ಪತ್ತಾಗಿದೆ. ಅಂದರೆ ಶಾಸಕರ ಖರೀದಿ ನಡೆದಿರಬಹುದು. ಜೈಲಿನಲ್ಲಿರುವ ಶಾಸಕರ ಸಹಿ ಪಡೆಯಲು ಕೂಡ ಹೋಗಿದ್ದಾರೆ. ಇದೆನ್ನೆಲ್ಲ ನೋಡಿ ಸಿದ್ದರಾಮಯ್ಯ ಬೇಸರಗೊಂಡಿದ್ದಾರೆ. ಐದು ವರ್ಷ ನಾನೇ ಸಿಎಂ ಎನ್ನುತ್ತಿದ್ದವರು ಈಗ ಹೈಕಮಾಂಡ್ ಹೇಳಿದಂತೆ ಕೇಳಬೇಕು ಎಂದು ಮಾತು ಬದಲಿಸಿದ್ದಾರೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಪಕ್ಷದ ಅಧ್ಯಕ್ಷರಾದರೂ ಅವರಿಗೆ ಯಾವುದೇ ಅಧಿಕಾರವಿಲ್ಲ. ಅವರು ಹೆಸರಿಗೆ ಮಾತ್ರ ಅಧ್ಯಕ್ಷರು. ಆದ್ದರಿಂದಲೇ ಏನೂ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ಬಿಹಾರ ಚುನಾವಣೆ ಬಳಿಕ ಸರ್ಕಾರ ಸಂಪೂರ್ಣ ದುರ್ಬಲವಾಗಿದೆ. ಬಿಜೆಪಿ ಮರು ಚುನಾವಣೆಯನ್ನು ನಿರೀಕ್ಷೆ ಮಾಡುತ್ತಿದೆ. ಒಂದು ವೇಳೆ ಚುನಾವಣೆ ನಡೆದರೆ ಬಿಜೆಪಿಗೆ ಬಹುಮತ ದೊರೆಯಲಿದೆ ಎಂದರು.


