ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ತಮ್ಮಾತಿಮ್ಮಿ ಗುಡ್ಡದ ಆಶ್ರಯ ನಿವೇಶನದಲ್ಲಿ ಮೂಲಭೂತ ಸೌಕರ್ಯ ಒದಗಿಸಿ ಈಗಾಗಲೇ ನಿವೇಶನ ಹಕ್ಕುಪತ್ರ ಪಡೆದುಕೊಂಡ ಫಲಾನುಭವಿಗಳಿಗೆ ಶೀಘ್ರದಲ್ಲಿ ಜಾಗ ಗುರುತಿಸಿ ಮನೆ ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ಶಾಸಕ ಡಾ. ಚಂದ್ರು ಲಮಾಣಿ ಆಶ್ರಯ ನಿವೇಶನ ಫಲಾನುಭವಿಗಳಿಗೆ ಭರವಸೆ ನೀಡಿದರು.
ಅವರು ಪಟ್ಟಣದ ಪುರಸಭೆಗೆ ಸೋಮವಾರ ಮುಂಜಾನೆ ಆಗಮಿಸಿದ ಸಂದರ್ಭದಲ್ಲಿ ಆಶ್ರಯ ನಿವೇಶನ ಫಲಾನುಭವಿಗಳು ಸೇರಿದಂತೆ ವಿವಿಧ ವಾರ್ಡ್ಗಳ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಪುರಸಭೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಾತನಾಡಿದರು.
ಈಗಾಗಲೇ ಆಶ್ರಯ ನಿವೇಶನ ಹಕ್ಕುಪತ್ರ ಪಡೆದುಕೊಂಡವರಿಗೆ ಜಾಗೆಯನ್ನು ತೋರಿಸಲಾಗಿಲ್ಲ. ಆದರೂ ಸಹ ಪುರಸಭೆಗೆ ನಿವೇಶನದ ಕರ ಪಾವತಿಸುತ್ತಿದ್ದಾರೆ. ಜಾಗೆಯಲ್ಲಿಯೇ ಅವರಿಲ್ಲದಿದ್ದರೂ ಕರ ವಸೂಲಿ ಮಾಡುತ್ತಿರುವುದು ಆಶ್ಚರ್ಯಕರವಾಗಿದೆ. ಮೊದಲು ಅವರಿಗೆ ಜಾಗ ತೋರಿಸುವ ಕೆಲಸ ಆಗಬೇಕು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ನಾಳೆಯಿಂದಲೇ ಈ ಕೆಲಸವನ್ನು ಮಾಡಬೇಕು ಎಂದು ನಿರ್ದೇಶನ ನೀಡಿದರು.
ತಮ್ಮಾತಿಮ್ಮಿ ಆಶ್ರಯ ನಿವೇಶನದಲ್ಲಿ ಮೊದಲು ಎರಡು ಬೋರ್‌ವೆಲ್ ಕೊರೆಯಿಸಿ ಪ್ರತಿ ನಿವೇಶನಕ್ಕೂ ನೀರಿನ ಸಂಪರ್ಕ ಕಲ್ಪಿಸುವದಕ್ಕೆ ಪೈಪ್‌ಲೈನ್ ಅಳವಡಿಸಿ, ನಿವೇಶನ ಪಡೆದವರು ಅಲ್ಲಿ ಮನೆ ಕಟ್ಟಿಕೊಳ್ಳುವದಕ್ಕೆ ಅವಕಾಶ ನೀಡಬೇಕು. ಶೀಘ್ರದಲ್ಲಿಯೇ ನಿವೇಶನ ಗುರುತಿಸಿ ಹಸ್ತಾಂತರಿಸುವ ಕಾರ್ಯಕ್ರಮವನ್ನು ಆಯೋಜಿಸುವಂತೆ ಸೂಚಿಸಿದರು.
ಇದೇ ವೇಳೆ ಮಂಜಲಾಪೂರದ ನಿವಾಸಿಗಳು ಕಚೇರಿಗೆ ಆಗಮಿಸಿ, ನೀರು ಸರಿಯಾಗಿ ಪೂರೈಸುತ್ತಿಲ್ಲ ಎಂದು ಶಾಸಕರಿಗೆ ದೂರು ನೀಡಿದರು. ಕಳೆದ ಒಂದು ತಿಂಗಳ ಹಿಂದೆಯೇ ನಿಮಗೆ ಕುಡಿಯುವ ನೀರಿನ ಸಮಸ್ಯೆಯಾಗಬಾರದು ಎಂದು ಹೇಳಿದ್ದೇನೆ. ಪದೇ ಪದೇ ಸಾರ್ವಜನಿಕರು ನೀರಿನ ಸಮಸ್ಯೆಯ ಬಗ್ಗೆ ಹೇಳುತ್ತಿದ್ದಾರೆ. ಮೊದಲು ಸಾರ್ವಜನಿಕರ ನೀರಿನ ಸಮಸ್ಯೆಯನ್ನು ಬಗೆಹರಿಸಿ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಕಸ ನಿರ್ವಹಣೆಯ ಬಗ್ಗೆಯೂ ಸಾರ್ವಜನಿಕರು ದೂರಿದರು.
ಈ ಸಂದರ್ಭದಲ್ಲಿ ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ, ಶೋಭಾ ಬೆಳ್ಳಿಕೊಪ್ಪ, ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್, ಕಂದಾಯ ನಿರೀಕ್ಷಕ ಸುರೇಶ ಪೂಜಾರ, ಲಿಂಬಯ್ಯನಮಠ, ಹನುಮಂತಪ್ಪ ನಂದೆಣ್ಣವರ, ಪುರಸಭೆ ಮಾಜಿ ಅಧ್ಯಕ್ಷ ಎಂ.ಆರ್. ಪಾಟೀಲ್, ನಿಂಗಪ್ಪ ಬನ್ನಿ, ಗಂಗಾಧರ ಮೆಣಸಿನಕಾಯಿ, ಮಂಜುನಾಥ ಹೊಗೆಸೊಪ್ಪಿನ ಪ್ರವೀಣ ಬೋಮಲೆ, ಶಕ್ತಿ ಕತ್ತಿ, ಬಸವರಾಜ ಕಲ್ಲೂರ ಮುಂತಾದವರಿದ್ದರು.
ಬಾಕ್ಸ್
ಪುರಸಭೆಯ ಭೇಟಿ ಅವಧಿಯಲ್ಲಿ ಶಾಸಕರು ಹಾಜರಾಗಿದ್ದರೂ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಅವರು ಕಚೇರಿಗೆ ಆಗಮಿಸಿರಲಿಲ್ಲ. ಹೀಗಾಗಿ ಶಾಸಕರು ಮುಖ್ಯಾಧಿಕಾರಿಗಳಿಗೆ ಕರೆ ಮಾಡಿ, ತರಾಟೆಗೆ ತೆಗೆದುಕೊಂಡು ಸಾರ್ವಜನಿಕ ಅಹವಾಲು ಆಲಿಸಲು ನೀವೇ ಇರದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.


