ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸರ್ಕಾರ ಮೆಕ್ಕೆ ಜೋಳವನ್ನು ಬೆಂಬಲ ಬೆಲೆಗೆ ಖರೀದಿಸಬೇಕು ಮತ್ತು ಆದಷ್ಟು ಬೇಗ ಖರೀದಿ ಕೇಂದ್ರಗಳು ಕಾರ್ಯಾರಂಭಗೊಳ್ಳಬೇಕು ಎಂದು ಲಕ್ಷ್ಮೇಶ್ವರದಲ್ಲಿ ಸಮಗ್ರ ರೈತ ಸಂಘಟನೆಗಳ ಒಕ್ಕೂಟ ಸೇರಿದಂತೆ ಹಲವು ಸಂಘಟನೆಗಳು, ಮಠಾಧೀಶರ ನೇತೃತ್ವದಲ್ಲಿ ನಡೆಸುತ್ತಿರುವ ಹೋರಾಟ 10ನೇ ದಿನ ಪೂರೈಸಿದೆ.
ಹೋರಾಟಕ್ಕೆ ಬೆಂಬಲ ನೀಡಲು ತಾಲೂಕಿನ ಗೊಜನೂರ ಗ್ರಾಮದಿಂದ ಲಕ್ಷ್ಮೇಶ್ವರದವರೆಗೆ ಹತ್ತಾರು ಎತ್ತು-ಚಕ್ಕಡಿಗಳ ಮೆರವಣಿಗೆ ಡೊಳ್ಳು, ವಾದ್ಯಮೇಳದೊಂದಿಗೆ ನೆರವೇರಿತು. ಪಟ್ಟಣದ ಮುಖ್ಯ ಬಜಾರ್ ರಸ್ತೆಯಲ್ಲಿ ಎತ್ತಿನ ಬಂಡಿ ಮೆರವಣಿಗೆ ಬರುತ್ತಿದ್ದಂತೆಯೇ ರೈತ ಹೋರಾಟಗಾರರು ಹಾವಳಿ ಆಂಜನೇಯ ಪಾದಗಟ್ಟಿಯಿಂದ ಧರಣಿ ಸ್ಥಳದವರೆಗೂ ದೀಡ ನಮಸ್ಕಾರದ ಸೇವೆ ಮಾಡಿದರು. ಸಂಪ್ರದಾಯಬದ್ಧವಾಗಿ ದೀಡ ನಮಸ್ಕಾರ ಸೇವೆಯ ಬಳಿಕ ರೈತರು ಸ್ನಾನ ಮಾಡಿದ ಬಳಿಕ ರೈತ ಮುಖಂಡ ಮಲ್ಲೇಶ ವಡ್ಡರ ಎಲ್ಲರಿಗೂ ಹೊಸ ಬಟ್ಟೆ ಕೊಡುವ ಸೇವೆ ಮಾಡಿದರು. ಅಲಂಕೃತ ಎತ್ತು-ಚಕ್ಕಡಿಯಲ್ಲಿ ಗ್ರಾಮದಿಂದಲೇ ಬುತ್ತಿ ಕಟ್ಟಿಕೊಂಡು ಬಂದು ಹೋರಾಟಗಾರರೊಂದಿಗೆ ಊಟ ಮಾಡಿದರು.
ಹೋರಾಟದ ನೇತೃತ್ವ ವಹಿಸಿರುವ ಮಂಜುನಾಥ ಮಾಗಡಿ, ರವಿಕಾಂತ ಅಂಗಡಿ, ಎಂ.ಎಸ್. ದೊಡ್ಡಗೌಡರ, ಪೂರ್ಣಾಜಿ ಖರಾಟೆ, ಹೊನ್ನಪ್ಪ ವಡ್ಡರ, ಶರಣು ಗೋಡಿ, ನಾಗರಾಜ ಚಿಂಚಲಿ, ನೀಲಪ್ಪ ಶರಸೂರಿ ಮಾತನಾಡಿ, ಈಗ ರೈತರಿಗೆ ಸರ್ಕಾರವೇ ದೇವರಾಗಿದ್ದು, ರೈತರ ಬೇಡಿಕೆ ಈಡೇರಿಕೆಗಾಗಿ ಈ ಎಲ್ಲ ಸೇವೆಗಳನ್ನು ಮಾಡುತ್ತಿದ್ದೇವೆ. ರೈತರ ಈ ಭಕ್ತಿ ಸೇವೆ ಆದಷ್ಟು ಬೇಗ ಸರ್ಕಾರದ ಮನಮುಟ್ಟಿ ಬೇಡಿಕೆ ಈಡೇರಲಿ. ರೈತರಿಗೆ ಯಾವುದೇ ಜಾತಿ, ಧರ್ಮ, ಪಕ್ಷದ ಹಂಗಿಲ್ಲ. ನ್ಯಾಯಯುತ ಬೇಡಿಕೆಗಾಗಿ ಹತ್ತು ದಿನಗಳಿಂದ ರೈತರು ಶಾಂತಿ, ಸಮಾಧಾನದಿಂದ ವಿನೂತನ ಹೋರಾಟ ಮಾಡಿದ್ದೇವೆ ಎಂದರು.
ಕುಂದಗೋಳ, ಹುಲ್ಲೂರ, ಬಟಗುಕಿ ಶ್ರೀಗಳು ಇದ್ದರು. ಸುತ್ತಲಿನ ಗ್ರಾಮಗಳ ರೈತರು ಹೋರಾಟಕ್ಕೆ ತಮ್ಮದೇ ಆದ ಸೇವೆಯ ಮೂಲಕ ಸಾಥ್ ನೀಡುತ್ತಿದ್ದು, ಹರಗಟ್ಟಿ ತಾಂಡಾದ ರೈತರು ತಮ್ಮದೇ ಸಂಪ್ರದಾಯದ ಭಜನೆಯ ಮೂಲಕ ಬೆಂಬಲಿಸಿದರು.
ಸೋಮವಾರದ ಹೋರಾಟದಲ್ಲಿ ಆದೇಶ ಹುಲಗೂರ, ಬಸಪ್ಪ ಶರಸೂರಿ, ಪ್ರಕಾಶ ಮೇವುಂಡಿ, ಚನ್ನಬಸಗೌಡ್ರ ಉದ್ದನಗೌಡ್ರ, ಮುದಕಣ್ಣ ಗದ್ದಿ, ಸುರೇಶ ಹಟ್ಟಿ, ಗಂಗಯ್ಯ ಕಲಕೇರಿಮಠ, ಅಶೋಕ ಅದರಗುಂಚಿ, ಮುತ್ತಣ್ಣ ಟೋಕಾಳಿ, ಈರಣ್ಣ ಹುಲಕೋಟಿ, ದೀಡ ನಮಸ್ಕಾರದ ಮೂಲಕ ಪ್ರತಿಭಟನೆ ಮಾಡಿದರು. ಮಲ್ಲನಗೌಡ ದೊಡ್ಡಗೌಡರ, ಈಶ್ವರ ಕಳಸದ, ಈಶ್ವರಪ್ಪ ಸವಣೂರ, ದೇವಪ್ಪ ಗೌಡಣ್ಣವರ, ಸೋಮು ನಿಟ್ಟೂರ, ಅಂದಾನಗೌಡ ಪಾಟೀಲ, ಕಲ್ಲನಗೌಡ ದೊಡ್ಡಗೌಡರ, ಶಿವಪ್ಪ ತಾರಿಕೊಪ್ಪ, ಪ್ರಭು ಕೊಂಡಿಕೊಪ್ಪ, ಚನ್ನಪ್ಪ ಷಣ್ಮುಕಿ, ಮಾಬುಸಾಬ ದೊಡ್ಡಮನ, ಚನ್ನಪ್ಪ ವಡಕಣ್ಣವರ, ಮಾದೇಗೌಡ ಬಾಗವಾಡ, ಸೋಮಣ್ಣ ಪಾಟೀಲ, ನಿಂಜಲಿಂಗಪ್ಪ ಸೊರಟೂರ ಸೇರಿ ಅನೇಕರಿದ್ದರು.
ರೈತರ ಹೋರಾಟಕ್ಕೆ ಬೆಂಬಲಾರ್ಥವಾಗಿ ಕಠಿಣ ಉಪವಾಸ ವ್ರತಾಚರಣೆ ಮಾಡಿ ಅಸ್ವಸ್ಥಗೊಂಡಿದ್ದ ಆದ್ರಳ್ಳಿ ಶ್ರೀ ಕುಮಾರ ಮಹಾರಾಜರು ಗುಣಮುಖರಾಗಿ ಸೋಮವಾರ ಮತ್ತೆ ಧರಣಿಯಲ್ಲಿ ಪಾಲ್ಗೊಂಡರು. ಈ ವೇಳೆ ಮಾತನಾಡಿದ ಅವರು, ಲಕ್ಷ್ಮೇಶ್ವರದ ರೈತರ ನ್ಯಾಯಯುತ ಹೋರಾಟ, ಬೇಡಿಕೆಯನ್ನು ಸರ್ಕಾರಕ್ಕೆ ತಲುಪಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಫಲವಾಗಿ ಸರ್ಕಾರ ಬೆಂಬಲ ಬೆಲೆಯಡಿ ಗೋವಿನ ಜೋಳ ಖರೀದಿಗೆ ನಿರ್ಧರಿಸಿದೆ. ಖರೀದಿ ಕೇಂದ್ರಗಳ ಕಾರ್ಯಾರಂಭವನ್ನು ವಿಳಂಬ ಮಾಡಿದರೆ ರೈತರು ನಷ್ಟಕ್ಕೊಳಗಾಗುತ್ತಾರೆ. ಆದ್ದರಿಂದ ಖರೀದಿ ಕೇಂದ್ರ ಪ್ರಾರಂಭವಾಗುವವರೆಗೂ ನಾವು ಮಠಕ್ಕೆ ಹೋಗದೇ ರೈತರರೊಂದಿಗೆ ಹೋರಾಟ ಮುಂದುವರೆಸುತ್ತೇವೆ ಎಂದರು.


