ವಿಜಯಸಾಕ್ಷಿ ಸುದ್ದಿ, ಗದಗ: ಡಿಜಿಟಲ್ ವಂಚನೆ, ಆನ್‌ಲೈನ್ ಗೇಮ್, ಜೂಜಾಟ ವ್ಯಸನದಿಂದ ಯುವಕರನ್ನು ರಕ್ಷಿಸುವ ಉದ್ದೇಶದಿಂದ ನ. 26ರಂದು ಬೆಳಗ್ಗೆ 11 ಗಂಟೆಗೆ ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ರಾಜ್ಯ ಕಾರ್ಯದರ್ಶಿ ಇಲಿಯಾಸ್ ನಾಲಬಂದ್ ಹೇಳಿದರು.
ಸೋಮವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಬಲ `ಯುವಕರು-ಶುದ್ಧ ಮನಸ್ಸು, ಸುರಕ್ಷಿತ ಭವಿಷ್ಯ’ ಎಂಬ ಘೋಷವಾಕ್ಯದಡಿ ಈ ಅಭಿಯಾನವನ್ನು ಆರಂಭಿಸಲಾಗಿದೆ. ಆನ್‌ಲೈನ್ ಬೆಟ್ಟಿಂಗ್, ಗೇಮಿಂಗ್, ಜೂಜಾಟ ಹಾಗೂ ಇನ್ನಿತರ ಡಿಜಿಟಲ್ ವಂಚನೆಯಿಂದ ಯುವಕರನ್ನು ಎಚ್ಚರಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಗದಗ-ಬೆಟಗೇರಿ ಅವಳಿ ನಗರದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮಹಮ್ಮದ್ ಯೂಸೂಫ್ ಮುಲ್ಲಾ, ರಿಯಾಜ್ ಅಹಮ್ಮದ್ ಶೇಖ್, ಅಬ್ದುಲ್ ಹಫೀಜ್ ಉಮಚಗಿ, ಮುನ್ನಾ ಕಲ್ಮನಿ, ಮಹಮ್ಮದ್ ತಾಹೀರ್ ಡಂಬಳ್, ಜಾವೇದ್ ಅಹಮ್ಮದ್, ಅಕ್ಬರ್ ಅಲಿ ಅತ್ತಾರ, ಖಾಸಿಂ ದರ್ಗದ್, ತನ್ವೀರ್ ಶೇಖ್ ಉಪಸ್ಥಿತರಿದ್ದರು.


