ವಿಜಯಸಾಕ್ಷಿ ಸುದ್ದಿ, ಗದಗ: ಯುವ ಪೀಳಿಗೆಯಲ್ಲಿ ಶಿಸ್ತು, ನಾಯಕತ್ವ, ಸಾಮಾಜಿಕ ಸೇವಾ ಮನೋಭಾವ ಬೆಳೆಸುವಲ್ಲಿ ಎನ್‌ಸಿಸಿಯ ಪಾತ್ರ ಅಪಾರ. ಪ್ರಾಕೃತಿಕ ವಿಕೋಪ, ರಕ್ತದಾನ, ಪರಿಸರ ಸಂರಕ್ಷಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಎನ್‌ಸಿಸಿ ಕ್ಯಾಡೆಟರ್‌ಗಳು ಮುಂಚೂಣಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯ ಶಿಕ್ಷಕ ಹಾಗೂ ಎನ್.ಸಿ.ಸಿ ಎ.ಎನ್.ಒ ಎಂ.ಎ. ರಿಕಾರ್ಟಿ ಹೇಳಿದರು.
ಶಹರದ ಆಂಗ್ಲೋ ಉರ್ದು ಬಾಲಕರ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಎನ್.ಸಿ.ಸಿ ದಿನಾಚರಣೆ ಪ್ರಯುಕ್ತ ಸಸಿ ನೆಟ್ಟು ಅವರು ಮಾತನಾಡಿದರು.
ಸಮಾಜ ಸೇವೆ, ಪರಿಸರ ರಕ್ಷಣೆ, ರಕ್ತದಾನ, ವಿಪತ್ತು ನಿರ್ವಹಣೆ, ವ್ಯಕ್ತಿತ್ವ ವಿಕಸನ, ನಾಯಕತ್ವ, ಸಮಯ ಪಾಲನೆ, ಧೈರ್ಯ ಮತ್ತು ನಿಸ್ವಾರ್ಥ ಸೇವೆ ಇಂತಹ ಜೀವನ ಮೌಲ್ಯಗಳನ್ನು ಕಲಿಸುತ್ತದೆ. ಯಾವಾಗಲಾದರೂ ಅಗ್ನಿ ಅವಘಡ, ಪ್ರವಾಹ, ಭೂಕಂಪ, ರಸ್ತೆ ಅಪಘಾತಗಳು ನಡೆದರೂ ಎನ್.ಸಿ.ಸಿ ವಿದ್ಯಾರ್ಥಿಗಳು ಮೊದಲಿಗರಾಗಿ ತೆರಳಿ ನೆರವು ನೀಡುತ್ತಾರೆ. ಇದುವೇ ನಿಜವಾದ ಸೇವೆ. ಯೋಧನಾಗುವುದಕ್ಕೆ ಗನ್ ಬೇಕಿಲ್ಲ. ಮನಸ್ಸಿನಲ್ಲಿ ಧೈರ್ಯ, ರಾಷ್ಟ್ರಪ್ರೇಮ ಮತ್ತು ಸೇವಾ ಮನೋಭಾವ ಇದ್ದರೆ ಸಾಕು ಎಂದರು.
ಶಿಕ್ಷಕ ಎಫ್.ಎಂ. ಢಾಲಾಯತ, ಎಂ.ಎ. ಪೀರಜಾದೆ, ಎಂ.ಜಿ. ಪಟೇಲ್, ಎಸ್.ಐ. ನದಾಫ್, ಇಸ್ಮಾಯಿಲ್ ಆರಿ ಸೇರಿದಂತೆ ಎನ್.ಸಿ.ಸಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.


