ವಿಜಯಸಾಕ್ಷಿ ಸುದ್ದಿ, ಗದಗ: ನ.26ರಿಂದ ನ.30ರವರೆಗೆ ಗಜೇಂದ್ರಗಡ ತಾಲೂಕಿನ ಜಿಗೇರಿ ಗ್ರಾಮದಲ್ಲಿ ಗುರು ಸಿದ್ದೇಶ್ವರ ಮಹಾಸ್ವಾಮಿಗಳವರ 40ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಧರ್ಮಸಭೆ, ಸಾಮೂಹಿಕ ವಿವಾಹ, ರಥೋತ್ಸವ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಜಿಗೇರಿ ಗುರುಸಿದ್ದೇಶ್ವರ ಮಹಾಮಠದ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನ.26ರಂದು ಸಂಜೆ 7.30 ಗಂಟೆಗೆ ಜರುಗುವ ಕಾರ್ಯಕ್ರಮದಲ್ಲಿ ಕೊತಬಾಳದ ಅಂಕಲಿಮಠ ಗಂಗಾಧರ ಮಹಾಸ್ವಾಮಿಗಳು, ಅಭಿನವ ಚನ್ನಬಸವ ಮಹಾಸ್ವಾಮಿಗಳು, ಡಾ. ಕೊಟ್ಟೂರೇಶ್ವರ ಮಹಾಸ್ವಾಮಿಗಳು, ಡಾ. ಹಿರಿಯಶಾಂತವೀರ ಮಹಾಸ್ವಾಮಿಗಳು, ಕೈಲಾಸಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಫಕ್ಕೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸುವರು.
ನ.27ರಂದು ಜರುಗುವ ಕಾರ್ಯಕ್ರಮದಲ್ಲಿ ರೋಣ ಗುಲಗಂಜಿಮಠದ ಗುರುಪಾದ ಮಹಾಸ್ವಾಮಿಗಳು, ಗುರುಶಾಂತ ಮಹಾಸ್ವಾಮಿಗಳು, ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು, ಶಿವಪೂಜ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಶಿವಸಿದ್ದೇಶ್ವರ ಮಹಾಸ್ವಾಮಿಗಳು, ಹಜರತ್ ಸೈಯದ್ ನಿಜಾಮುದ್ದಿನ ಷಾ, ಶಿವಕುಮಾರ ಶರಣರು, ಮಹೇಶ್ವರ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸುವರು. ನ.28, 29ರಂದು ಕಾರ್ಯಕ್ರಮ ಜರುಗುವದು. ನ.30ರಂದು ಸಂಜೆ 5 ಗಂಟೆಗೆ ಮಹಾರಥೋತ್ಸವ ಜರುಗಲಿದೆ ಎಂದು ತಿಳಿಸಿದರು.
ಮಲ್ಲಸಮುದ್ರಗಿರಿ ಓಂಕಾರೇಶ್ವರ ಮಠದ ಫಕೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಕಾರ್ಯಕ್ರಮಕ್ಕೆ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ರೋಣ ಶಾಸಕ ಜಿ.ಎಸ್. ಪಾಟೀಲ, ಸಚಿವ ಎಚ್.ಕೆ. ಪಾಟೀಲ, ಶಾಸಕ ಸಿ.ಸಿ. ಪಾಟೀಲ, ಡಿ.ಆರ್. ಪಾಟೀಲ, ಕಳಕಪ್ಪ ಬಂಡಿ ಸೇರಿದಂತೆ ಅನೇಕ ಗಣ್ಯರು ಆಗಮಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ಬಡಿಗೇರ, ಮಹಾಗುಂಡಪ್ಪ, ಹನುಂಮತರೆಡ್ಡಿ, ಶಂಕರ ಮುಂತಾದವರು ಹಾಜರಿದ್ದರು.



