ಹಾವೇರಿ: ಪಕ್ಷಕ್ಕೆ ಸಾವಿರಾರು ಮಂದಿ ಶ್ರಮಿಸಿದ್ದಾರೆ. ಆದರೆ ದುಡಿದ ಪ್ರತಿಯೊಬ್ಬರಿಗೂ ಕೂಡಲೇ ಸ್ಥಾನ ಅಥವಾ ಆದಾಯ ಸಿಗುತ್ತದೆ ಎನ್ನುವುದಿಲ್ಲ. ಕೆಲವರಿಗೆ ಸಿಗುತ್ತದೆ, ಕೆಲವರಿಗೆ ಸಿಗುವುದಿಲ್ಲ. ಆದರೆ ಎಲ್ಲರಿಗೂ ಕೂಲಿ ಸಿಗುವವರೆಗೆ ಕಾಯಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಹಾವೇರಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿಎಂ ಆಗುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ,“ನಮ್ದೇನೇ ಇದ್ರೂ 2028. 2028ರಲ್ಲಿ ಚುನಾವಣೆ ಗೆದ್ದ ನಂತರ ಆ ವಿಷಯವನ್ನು ಚರ್ಚಿಸೋಣ” ಎಂದು ಸ್ಪಷ್ಟಪಡಿಸಿದರು.
ಡೆಪ್ಯುಟಿ ಸಿಎಂ ಡಿ.ಕೆ. ಶಿವಕುಮಾರ್ ಅವರ “ಜಗತ್ತಿನಲ್ಲಿ ಕೊಟ್ಟ ಮಾತಿಗೆ ತಕ್ಕಂತೆ ನಡೆದವನು ಶಕ್ತಿವಂತ” ಎಂಬ ಸಾಮಾಜಿಕ ಜಾಲತಾಣ ಪೋಸ್ಟ್ ಕುರಿತು ಪ್ರತಿಕ್ರಿಯಿಸಲು ಕೇಳಿದಾಗ,“ಅದಕ್ಕೆ ಉತ್ತರ ನಿಮಗೆ ದೆಹಲಿಯಲ್ಲಿ ಸಿಗುತ್ತೆ, ಹಾವೇರಿಯಲ್ಲಿ ಅಲ್ಲ” ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಅವರು, “ಹೈಕಮಾಂಡ್ ನಮಗೆ ಮಾತನಾಡಬೇಡಿ ಎಂದು ಹೇಳಿಲ್ಲ. ನಾವು ಪಕ್ಷದ ವಿರುದ್ಧ ಮಾತನಾಡಿಲ್ಲ, ಪಕ್ಷದ ಪರವಾಗಿ ಮಾತನಾಡಿದ್ದೇವೆ. ಹೈಕಮಾಂಡ್ ನಮಗೆ ಮೌನವಾಗಿರಿ ಎನ್ನುವ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟನೆ ನೀಡಿದರು.



