ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಬಿಜೆಪಿಯ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ನ ಮಾಜಿ ಸಚಿವ ವಿನಯ ಕುಲಕರ್ಣಿ ಯಾವುದೇ ತಪ್ಪು ಮಾಡಿಲ್ಲ, ಶೀಘ್ರವೇ ಅವರು ಕಾನೂನಿನ ಹೋರಾಟದಲ್ಲಿ ಜಯ ಗಳಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಶನಿವಾರ ಹಿಂಡಲಗಾ ಕಾರಾಗೃಹದಿಂದ ಜಾಮೀನಿನ ಮೇಲೆ ಹೊರಬಂದ ವಿನಯ ಕುಲಕರ್ಣಿ, ಬೆಂಗಳೂರಿನಲ್ಲಿ ಡಿ.ಕೆ. ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ನಾಯಕರು ಏನೇನು ಮಾತನಾಡಿದ್ದಾರೆ ಎಂದು ಹಳೆಯ ಕಡತ ತೆಗೆದು ನೋಡಿದರೆ ವಿನಯ ಕುಲಕರ್ಣಿ ಅವರ ಬಂಧನದ ಹಿಂದಿನ ಕಾರಣ ಸ್ಪಷ್ಟವಾಗಿ ತಿಳಿಯುತ್ತದೆ.
ಕೊಲೆ ಪ್ರಕರಣದಲ್ಲಿ ವಿನಯ ಕುಲಕರ್ಣಿ ಜೈಲಿನೊಳಗೆ ಮತ್ತು ಹೊರಗೆ ಅನುಭವಿಸಿದ ನೋವನ್ನು ನನ್ನ ಬಳಿ ಹೇಳಿಕೊಂಡಿದ್ದಾರೆ. ಅದನ್ನೆಲ್ಲ ನಾನು ಬಹಿರಂಗವಾಗಿ ಹೇಳಲು ಹೋಗಲ್ಲ. ಅದು ಸದ್ಯಕ್ಕೆ ಅವರಲ್ಲೇ ಇರಲಿ.
ಮುಂದಿನ ದಿನಗಳಲ್ಲಿ ಅವರು ಪಕ್ಷದ ಸಂಘಟನೆಯಲ್ಲಿ ಕೆಲಸ ಮಾಡಲಿದ್ದಾರೆ. ಪಕ್ಷ ಅವರ ಜೊತೆಯಲ್ಲಿ ನಿಲ್ಲಲಿದೆ ಎಂದು ಹೇಳಿದರು.
ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹುಚ್ಚ ಎಂದು ಟೀಕಿಸಿದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಸುದ್ದಿಯಲ್ಲಿರಬೇಕೆಂಬ ಆಸೆಯಿಂದ ಆ ಹುಚ್ಚ ಮಾತನಾಡಿದ್ದಾನೆ. ಕೊರೊನಾ ಸಂದರ್ಭದಲ್ಲಿ ಜನ ಸಂಕಷ್ಟ ಅನುಭವಿಸಿದ್ದಾರೆ. ಬೆಲೆ ಏರಿಕೆಯಾಗಿದೆ, ನಿರುದ್ಯೋಗ ಹೆಚ್ಚಾಗಿದೆ. ಅದನ್ನೆಲ್ಲ ಮರೆ ಮಾಚಿ ಜನರ ಗಮನ ಬೇರೆಡೆಗೆ ಸೆಳೆಯಲು ಬಿಜೆಪಿಯವರು ಕಾಂಗ್ರೆಸ್ ನಾಯಕರನ್ನು ಟೀಕಿಸುವ ಪ್ರಯತ್ನ ಮಾಡುತ್ತಿದ್ದಾರೆ. ಜನ ಇದನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದರು.