ಬೆಂಗಳೂರು:- ನಗರದಲ್ಲಿ ಆದಾಯ ತೆರಿಗೆ ಇಲಾಖೆ ಹಾಗೂ ಸರಕು ಮತ್ತು ಸೇವಾ ತೆರಿಗೆ ಇಲಾಖೆ ಅಧಿಕಾರಿಗಳು ಕಳೆದ 15 ದಿನಗಳಿಂದ ಮಿಂಚಿನ ಕಾರ್ಯಾಚರಣೆ ನಡೆಸಿ 100 ಕೋಟಿ ರೂ. ಮೌಲ್ಯದ ಅಕ್ರಮವನ್ನು ಬಯಲಿಗೆಳೆದಿದ್ದಾರೆ.
ನಗರದ ಕೇಂದ್ರ ವಿಭಾಗ ಸೇರಿದಂತೆ ಚಿಕ್ಕಪೇಟೆ, ಅವೆನ್ಯೂ ರಸ್ತೆ, ಬಿವಿಕೆ ರಸ್ತೆ, ಜೆಸಿ ರಸ್ತೆ, ಎಸ್‌ಪಿ ರೋಡ್ ಪ್ರದೇಶಗಳಲ್ಲಿನ ಹಲವು ವ್ಯಾಪಾರಸ್ಥರ ಮಳಿಗೆಗಳ ಮೇಲೆ ದಾಳಿ ನಡೆದಿದೆ. ದಾಳಿಯಲ್ಲಿ ಎಲೆಕ್ಟ್ರಾನಿಕ್ಸ್, ವಾಹನ ಬಿಡಿಭಾಗಗಳು, ಗಿಫ್ಟ್ ಐಟಂಗಳು, ಒಣಹಣ್ಣುಗಳು ಸೇರಿದಂತೆ ವಿವಿಧ ಸಾಮಗ್ರಿಗಳ ಖರೀದಿ–ಮಾರಾಟದಲ್ಲಿ ತೆರಿಗೆ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಈ ವೇಳೆ 500 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ಮಾಡಿ, 100 ಕೋಟಿ ರೂ. ಮರೆಮಾಚಿದ್ದ ವಹಿವಾಟು ಪತ್ತೆ ಮಾಡಿದ್ದಾರೆ.
ತೆರಿಗೆ ವಂಚನೆ ನಡೆಸಿದ ವ್ಯಾಪಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು, ಹೆಚ್ಚಿನ ದಾಖಲೆಗಳನ್ನು ಪರಿಶೀಲಿಸುವ ಕಾರ್ಯ ಮುಂದುವರಿದಿದೆ.



