ಬೆಂಗಳೂರು:- ರಾಜ್ಯ ಕಾಂಗ್ರೆಸ್ ನಲ್ಲಿ ತೀವ್ರಗೊಂಡಿದ್ದ ಅಧಿಕಾರ ಹಂಚಿಕೆ ಗೊಂದಲಗಳಿಗೆ ತೆರೆ ಎಳೆಯಲು ಹೈಕಮಾಂಡ್ ಸೂಚನೆ ಮೇರೆಗೆ ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬ್ರೇಕ್ಫಾಸ್ಟ್ ಮೀಟಿಂಗ್ ನಡೆಸಿದರು.
ಮೀಟಿಂಗ್ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಇದೀಗ ಒಗ್ಗಟ್ಟು ಪ್ರದರ್ಶನ ಮಾಡಿದ್ದು, ಹಲವು ಗೊಂದಲಗಳಿಗೆ ತೆರೆ ಎಳೆಯಲು ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಮೊದಲಿಗೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ನನ್ನ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ .
ರಾಜ್ಯದಲ್ಲಿ ಅನಗತ್ಯ ಗೊಂದಲ ನಿರ್ಮಾಣವಾಗಿದೆ. ನಮಗೆ 2028ರ ವಿಧಾನಸಭಾ ಚುನಾವಣೆ ಭಾರೀ ಮುಖ್ಯ. ನನ್ನ ಹಾಗೂ ಡಿಕೆಶಿ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಈಗಲೂ ಇಲ್ಲ, ಮುಂದೆಯೂ ಇರುವುದಿಲ್ಲ ಎಂದು ಹೇಳಿದರು. ಪಕ್ಷದ ಹೈಕಮಾಂಡ್ ಹೇಳಿದಂತೆ ನಾವು ಕೇಳುತ್ತೇವೆ. ನಾಳೆಯಿಂದ ರಾಜ್ಯದಲ್ಲಿ ಯಾವುದೇ ಗೊಂದಲ ಇರುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ಸಿದ್ದರಾಮಯ್ಯ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ಮುಂದೆ ಶಕ್ತಿಶಾಲಿಯಾಗಿ ಸರ್ಕಾರವನ್ನು ಮುಂದುವರೆಸಿಕೊಂಡು ಹೋಗಬೇಕು. ಹೈಕಮಾಂಡ್ ತೀರ್ಮಾನಕ್ಕೆ ನಾನು ಮತ್ತು ಸಿಎಂ ಬದ್ಧರಾಗಿದ್ದೇವೆ. ಹೈಕಮಾಂಡ್ ಹೇಳಿದಂತೆ ಕೆಲಸ ಮಾಡಿಕೊಂಡು ಹೋಗುತ್ತೇವೆ. ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿದ್ದೇವೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ರಚನೆ ಅಗಿದೆ. ರಾಜ್ಯದ ಜನರು ಅಪಾರ ಅವಕಾಶ ನೀಡಿದ್ದಾರೆ ಎಂದು ಹೇಳಿದ್ದಾರೆ.
ವಿಧಾನ ಸಭೆ ಅಧಿವೇಶನ ಆರಂಭ ಆಗುತ್ತದೆ. ನಾವು ಪ್ರತಿತಂತ್ರ ರೂಪಿಸುತ್ತೇವೆ. ನಮ್ಮ ವರಿಷ್ಠರು ಹೇಳಿದಂತೆ ನಾವು ಕೇಳುತ್ತೇವೆ. ನಮ್ಮ ನಿರ್ಧಾರ ಅಚಲವಾಗಿದೆ. ಹಿಂದೆ ಅವಕಾಶ ನೀಡಿಲ್ಲ. ಈಗಲೂ ನೀಡಲ್ಲ, ಹಿಂದೆಯೂ ಅವಕಾಶ ಕೊಟ್ಟಿರಲಿಲ್ಲ. ಪಕ್ಷದ ಹೈಕಮಾಂಡ್ ಆದೇಶದಂತೆ ನಮ್ಮ ನಡೆ. ಕೆಲವರು ನಮ್ಮ ಜತೆ ಮಾತನಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಸಂದೇಶಕ್ಕೆ ನಾನು ಸಹ ಮತ ವ್ಯಕ್ತಪಡಿಸುತ್ತೇನೆ. ಇಡೀ ದೇಶದಲ್ಲಿ ಕಾಂಗ್ರೆಸ್ ಸಂಕಷ್ಟದಲ್ಲಿದೆ. 2028ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ನಿರ್ಧರಿಸಿದ್ದೇವೆ. ಪಕ್ಷ ಹೇಳಿದರೆ ದೆಹಲಿಗೆ ಹೋಗುತ್ತೇವೆ. ಲೋಕಸಭೆ ಅಧಿವೇಶನ ಇದೆ. ಹೀಗಾಗಿ ದೆಹಲಿಗೆ ತೆರಳಿ ಸಂಸದರ ಭೇಟಿ ಮಾಡಬೇಕು ಎಂದು ಹೇಳಿದ್ದಾರೆ.



