ಬೆಳಗಾವಿ:- ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ಸಾಲದ ಒತ್ತಡಕ್ಕೆ ಬೇಸತ್ತು ರೈತ ಯುವಕ ನೇಣಿಗೆ ಶರಣಾದ ದುರ್ಘಟನೆ ನಡೆದಿದೆ.
ತಾಂವಶಿಯ 35 ವರ್ಷದ ಕಾಂತೇಶ ಪಾಂಡು ಕುಂಬಾರ ಅವರು ಗ್ರಾಮ ಹೊರವಲಯದ ಕುಂಬಾರ ತೋಟದಲ್ಲಿರುವ ಗಣೇಶ ಗುಡಿ ಹತ್ತಿರ ಬೇವಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಕಾಂತೇಶ ಅವರು ರಾಷ್ಟ್ರೀಕೃತ ಬ್ಯಾಂಕ್, ಫೈನಾನ್ಸ್, ಸಹಕಾರಿ ಬ್ಯಾಂಕ್ ಮತ್ತು ವಿವಿಧ ಸಂಘ ಸಂಸ್ಥೆಗಳ ಬಳಿ ಒಟ್ಟು 15 ಲಕ್ಷ ರೂ. ಸಾಲ ಹೊಂದಿದ್ದು, ಅದರ ಕಿರುಕುಳದಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ವಿವಾಹಿತನಾದ ಕಾಂತೇಶ ಅವರಿಗೆ ಮೂರು ಹೆಣ್ಣು ಮಕ್ಕಳಿದ್ದು, ಪತಿಯನ್ನ ಕಳೆದುಕೊಂಡ ಪತ್ನಿ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುತ್ತ ಸರ್ಕಾರದಿಂದ ನೆರವಿಗಾಗಿ ಮನವಿ ಮಾಡಿದ್ದಾರೆ. ಘಟನೆಯ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



