ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬೆಂಗಳೂರಿನ ಸುಚಿತ್ರಾ ಸಿನಿಮಾ ಕಲ್ಚರಲ್ ಹಾಲ್‌ನಲ್ಲಿ ಇತ್ತೀಚೆಗೆ ಶ್ರೀ ಸಾಯಿ ಕಲಾ ಟ್ರಸ್ಟ್ ವತಿಯಿಂದ ನಡೆದ 10ನೇ ವರ್ಷದ ವಾರ್ಷಿಕೋತ್ಸವ ಹಾಗೂ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಲಕ್ಷ್ಮೇಶ್ವರದ ಸೃಜನಶೀಲ ಸಾಹಿತಿ ಡಾ. ಸಂಗಮೇಶ ತಮ್ಮನಗೌಡ್ರ ಅವರ ಸಾಧನೆಯ ಸಂತೃಪ್ತರು ಭಾಗ-1’ ಕೃತಿಯನ್ನು ಚಲನಚಿತ್ರ ನಟ, ನಿರ್ಮಾಪಕ, ನಿರ್ದೇಶಕರಾದ ಕೃಷ್ಣೇಗೌಡರು ಬಿಡುಗಡೆಗೊಳಿಸಿದರು. 2ನೇ ಕೃತಿಯಾದ ಆಧ್ಯಾತ್ಮವಾದಿಯಾಗುತ್ತಿರುವ ಶಿಗ್ಲಿ ಬಸ್ಯಾ’ ಕೃತಿಯನ್ನು ರಂಗಭೂಮಿ, ಚಲನಚಿತ್ರ ನಟರಾದ ಮೈಸೂರು ರಮಾಕಾಂತ್ ಅವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಕೃಷ್ಣೇಗೌಡರು ಮಾತನಾಡುತ್ತ, ಇದುವರೆಗೆ 115 ಕೃತಿಗಳನ್ನು ರಚಿಸಿರುವ ಗದಗ জেলার ಲಕ್ಷ್ಮೇಶ್ವರದ ಸಾಹಿತಿ ಡಾ. ಸಂಗಮೇಶ ತಮ್ಮನಗೌಡ್ರ ಅವರು ಪ್ರಜ್ಞಾವಂತ ಸಾಹಿತಿಯಾಗಿದ್ದು, ಅವರು ಬೆಂಗಳೂರಿನ ಸಾಯಿ ಕಲಾ ಟ್ರಸ್ಟಿನಲ್ಲಿ ಪುಸ್ತಕ ಬಿಡುಗಡೆಗೊಳಿಸುತ್ತಿರುವುದು ಹೆಮ್ಮೆ ಸಂಗತಿಯಾಗಿದೆ ಎಂದರು.
ಮೈಸೂರು ರಮಾಕಾಂತ ಮಾತನಾಡಿ, ಕನ್ನಡ ಸಾಹಿತ್ಯ ಕೃತಿಗಳನ್ನು ಕೊಂಡು ಓದುವವರು ಹೆಚ್ಚಾಗಬೇಕು. ಅಂದಾಗ ಕನ್ನಡ ಸಾಹಿತ್ಯವು ಬೆಳೆಯುತ್ತದೆ. ಡಾ. ಸಂಗಮೇಶ ತಮ್ಮನಗೌಡ್ರ ಅವರು ನಮ್ಮ ನಾಡಿನ ಸೃಜನಾತ್ಮಕ, ಹಿರಿಯ ಸಾಹಿತಿಯಾಗಿದ್ದು, ಅವರ ಸಾಹಿತ್ಯ ಸೇವೆಯು ಬಹುಜನರಿಗೆ ಪ್ರೇರಣೆಯಾಗಿದೆ ಎಂದರು.
ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಅಧ್ಯಕ್ಷರಾದ ಗಂಡಸಿ ಸದಾನಂದ, ಚಲನಚಿತ್ರ ನಟರು ನಿರ್ಮಾಪಕರಾದ ಮಹೇಂದ್ರ ಮುನ್ನೋತ್, ರವಿ ಬೆಳಗೆರೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್‌ನ ಅಧ್ಯಕ್ಷರಾದ ಯಶೋಮತಿ ರವಿ ಬೆಳಗೆರೆ, ಖ್ಯಾತ ಗಾಯಕರಾದ ಶಶಿಧರ ಕೋಟೆ, ಸಮಾಜಸೇವಕರಾದ ಸುಹೇಲ್ ಖಾನ್, ವಿ.ಬೃಂದಾಶ್ರೀ ಬನವಾಡಿ, ಕಾರ್ಯಕ್ರಮ ಆಯೋಜಕಿ ಸವಿತಾ ಸಿ.ಗೌಡ ಇದ್ದರು.
ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆಯಾದ ಬಗ್ಗೆ ರಾಮಗಿರಿಯ ವರಕವಿ ಡಾ. ದ.ರಾ. ಬೇಂದ್ರೆ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿ ಶಂಕ್ರಪ್ಪ ಶಿಳ್ಳಿನ ಹಾಗೂ ಮುಳಗುಂದದ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಮಹಾಂತೇಶ ಕಣವಿ ಮತ್ತು ಶಾಲಾ ಶಿಕ್ಷಕ ಸಿಬ್ಬಂದಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



