ಚಿಕ್ಕಮಗಳೂರು:- ಜಿಲ್ಲೆಯ ತರೀಕೆರೆಯಲ್ಲಿ ಮಕ್ಕಳ ಮೇಲೆ ದಾಳಿ ನಡೆಸಿ ಆತಂಕ ಸೃಷ್ಟಿಸಿದ್ದ ಚಿರತೆಯು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ವೇಳೆ ಸಾವನ್ನಪ್ಪಿದೆ.
ಈ ಚಿರತೆಯು, ಇತ್ತೀಚೆಗೆ ಕಾಫಿನಾಡಿನ ತರೀಕೆರೆ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಮಕ್ಕಳ ಮೇಲೆ ದಾಳಿ ಮಾಡಿ ಓರ್ವ ಬಾಲಕಿಯನ್ನ ಬಲಿ ಪಡೆದು ಮತ್ತೊಬ್ಬ ಬಾಲಕನ ಮೇಲೆ ದಾಳಿ ಮಾಡಿತ್ತು. ಚಿರತೆ ಸಾವಿನಿಂದಾಗಿ ತರೀಕೆರೆ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಮಕ್ಕಳ ಮೇಲೆ ಹೆಚ್ಚು ದಾಳಿ ಮಾಡುವ ಚಿರತೆ ಸೆರೆಗೆ ನಿನ್ನೆ ತರೀಕೆರೆ ತಾಲೂಕಿನ ಬೈರಾಪುರ ಗ್ರಾಮದಲ್ಲಿ ಕಾರ್ಯಚರಣೆ ನಡೆಸಲು ಅರಣ್ಯ ಇಲಾಖೆ ಪ್ಲಾನ್ ಮಾಡಿತ್ತು. ಕಾರ್ಯಚರಣೆಗಾಗಿ ಕುಮ್ಕಿ ಆನೆಗಳನ್ನ ಕರೆಸಿತ್ತು. ಆದರೆ ಬೈರಾಪುರ ಬಳಿ ಓಡಾಟ ನಡೆಸುತ್ತಿದ್ದ ಚಿರತೆ ಕಾರ್ಯಚರಣೆ ವೇಳೆ ಸಾವನ್ನಪ್ಪಿದೆ.
ಬೈರಾಪುರ ಗ್ರಾಮದ ಹೊರವಲಯದ ಪಾಳು ಬಿದ್ದ ಲೈನ್ನಲ್ಲಿ ಅಡಗಿ ಕುಳಿತಿದ್ದ ಚಿರತೆ ಸೆರೆಗಾಗಿ ಸಿಬ್ಬಂದಿಗಳು ತೆರಳಿದ್ದಾಗ ಚಿರತೆ ದಾಳಿಗೆ ಯತ್ನಿಸಿದೆ. ಹೀಗಾಗಿ ಅರಣ್ಯ ಸಿಬ್ಬಂದಿ ತಮ್ಮ ಆತ್ಮರಕ್ಷಣೆಗಾಗಿ ಚಿರತೆಗೆ ಗುಂಡು ಹಾರಿಸಿದ್ದಾರೆ.



